ಬೆಂಗಳೂರು,ಮೇ.30-
ವಾಲ್ಮೀಕಿ ಅಭಿವೃದ್ಧಿ ನಿಗಮದ ನಿದೇರ್ಶಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ನಾಗೇಂದ್ರ ಅವರ ನೇರ ಪಾತ್ರ ಇದೆ ಎಂದು ಆರೋಪಿಸಿರುವ ಬಿಜೆಪಿ ಇದೀಗ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ.
ಅಕ್ರಮದ ಸುಳಿಗೆ ಸಿಲುಕಿ ಅಧಿಕಾರಿಯು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಜೂನ್ 6 ರೊಳಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವಾದಲ್ಲಿ ರಾಜ್ಯದ್ಯಂತ ಹೋರಾಟ ನಡೆಸುವುದಾಗಿ ಬೆದರಿಕೆ ಹಾಕಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್. ಆಶೋಕ್, ಮಾಜಿ ಸಚಿವರಾದ ಸಿಟಿ ರವಿ, ಗೋವಿಂದ ಕಾರಜೋಳ, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್, ಶಾಸಕ ಸಿಕೆ ರಾಮಮೂರ್ತಿ ಅವರುಗಳು ಸಚಿವ ನಾಗೇಂದ್ರ ಜೂನ್ 6 ರೊಳಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ರಾಜ್ಯದ್ಯಾಂತ ಹೋರಾಟ ಆರಂಭಿಸುವುದಾಗಿ ತಿಳಿಸಿದರು.
ಆರ್ ಅಶೋಕ್ ಮಾತನಾಡಿ, ಸಚಿವ ನಾಗೇಂದ್ರ ರಾಜೀನಾಮೆ ಕೊಡಲೇಬೇಕು. ಜೂನ್ 6 ರೊಳಗೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಇಡೀ ರಾಜ್ಯಾದ್ಯಂತ ದಲಿತರ ಹಣವನ್ನು ನುಂಗಿದ ಕಾಂಗ್ರೆಸ್ ಎಂದು ಹೋರಾಟ ಮಾಡುತ್ತೇವೆ. ಈ ವಿಷಯ ವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯವ ತನಕ ಬಿಡುವುದಿಲ್ಲ.ಎಂದು ಹೇಳಿದರು.
ಸಚಿವ ನಾಗೇಂದ್ರ ಅವರ ಸೂಚನೆಯ ಮೇರೆಗೆ ಈ ಅಕ್ರಮ ನಡೆದಿದೆ.ದಲಿತರ ಹಣ ಲೂಟಿ ಆಗಿರುವುದನ್ನು ನೋಡಿಕೊಂಡು ಬಿಜೆಪಿ ಸುಮ್ಮನೆ ಕೂರಬಾರದು ಎಂಬ ತೀರ್ಮಾನವನ್ನು ಪಕ್ಷದ ಉನ್ನತ ನಾಯಕತ್ವ ತೆಗೆದುಕೊಂಡಿದೆ ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಡೆತ್ ನೋಟ್ ನಲ್ಲಿ ಸಚಿವರ ಮೌಖಿಕ ಆದೇಶದಿಂದ ಹಣ ವರ್ಗಾವಣೆ ಬಗ್ಗೆ ಅವರು ಬರೆದಿದ್ದಾರೆ. ಇಷ್ಟು ಸ್ಪಷ್ಟವಾಗಿ ಆಗಿ ಡೆತ್ ನೋಟ್ ಬರೆದಿರುವ ಅಧಿಕಾರಿಯನ್ನು ನಾನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಅವರು ಸಂಪೂರ್ಣವಾಗಿ ವಿವರವುಳ್ಳ ಮಾಹಿತಿಯನ್ನು ಡೀಟೈಲ್‌್ಸ ಬರೆದಿದ್ದಾರೆ.ಲೂಟಿ ಮಾಡಿರುವುದು ಕಂಡು ಬಂದಿದೆ, ಇದರಲ್ಲಿ ನನ್ನ ತಪ್ಪೇನು ಇಲ್ಲ, ಮತ್ತೊಮ್ಮೆ ನನ್ನ ಪರಿಸ್ಥಿತಿ ಕಾರಣ ಎಂದರೆ, ಮತ್ತೊಮ್ಮೆ ಎಲ್ಲರೂ ಕಾರಣ. ಈ ನಿಗಮಕ್ಕೆ ನಾನು ಏನು ವಂಚನೆ ಮಾಡಿರುವುದಿಲ್ಲ ಎಂದು ಬರೆದಿದ್ದಾರೆ. ಇದಕ್ಕೀಂತ ಬೇರೆ ದಾಖಲೆ ಇನ್ನೇನು ಬೇಕು ಎಂದು ಪ್ರಶ್ನಿಸಿದರು.
ಎಫ್‌ಐಆರ್ ನಲ್ಲಿ ಸಚಿವರ ಹೆಸರು ಯಾಕಿಲ್ಲ..? ಹಣ ಗುಳುಮ್ ಮಾಡಿದ್ದ ಅಧಿಕಾರಿಗಳನ್ನು ಇದುವರೆಗೂ ಏಕೆ ಬಂಧಿಸಿಲ್ಲ.? ಅವರನ್ನು ಬಂಧಿಸಿದರೆ, ನಿಮ್ಮ ಬಂಡವಾಳ ಬಯಲಿಗೆ ಬರುತ್ತದೆಯೇ ಎಂಬ ಭಯ ಕಾಡುತ್ತಿದಿಯೇ? ಪ್ರಕರಣವನ್ನು ಸಿಐಡಿಗೆ ಯಾಕೆ ಕೊಟ್ಟಿದ್ದಾರೆ ಎಂದರೆ, ಇದು ಕಾಂಗ್ರೆಸ್ ಇನ್ವಿಸ್ಟಿಗೇಷನ್ ಟೀಮ್ ಎಂದು ಟೀಕಾ ಪ್ರಹಾರ ನಡೆಸಿದರು.
ಮಾಜಿ ಸಚಿವ ಸಿ ಟಿ ರವಿ ಮಾತನಾಡಿ, ಡೆಡ್ ನೋಟ್ ನಲ್ಲಿ ನಾಗರಾಜ್ ಎಂಬವವರು ಹೆಸರು ಇದೆ.ನಾಗರಾಜ್ ಅವರು ನಾಗೇಂದ್ರ ಅವರ ವ್ಯಾವಹಾರಿಕ ಪಾರ್ಟರ್. ಅವರು ಹಲವು ಬಾರಿ ಸಿಎಂ, ಡಿಸಿಎಂ ,ನಾಗೇಂದ್ರ ಜೊತೆ ವಿಶೇಷ ವಿಮಾನದಲ್ಲಿ ನವದೆಹಲಿಗೆ ಹೋಗಿದ್ದಾರೆ. ಇಂತಹವರು ಹೋಗಲು ಸಾಧ್ಯವೇ..?ಬೇರೆಯವರ ಜೊತೆ ಸ್ಪೆಷಲ್ ಫ್ಲೈಟ್ ನಲ್ಲಿ ಹೋಗಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಇದು ದೊಡ್ಡ ಹಗರಣವಾಗಿದ್ದು, ನಾಗೇಂದ್ರ ಸಚಿವರ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು.ಸರ್ಕಾರ ವಜಾ ಆಗೋವರೆಗೂ ನಮ್ಮ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುತ್ತಿಗೆ ಯತ್ನ :
ಮತ್ತೊಂದೆಡೆ ಬಿಜೆಪಿ ಪರಿಶಿಷ್ಟ ಮೋರ್ಚಾದ ಕಾರ್ಯಕರ್ತರು ನಿಗಮದಲ್ಲಿ ಆಗಿರುವ 187 ಕೋಟಿ ರೂ. ಅವ್ಯವಹಾರದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಕುಮಾರ ಕೃಪ ಅತಿಥಿಗೃಹದ ಬಳಿ ಎಸ್ ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತ್ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ಮಂದಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಾ ಮೆರವಣಿಗೆಯಲ್ಲಿ ತೆರಳಲು ಮುಂದಾಗುತ್ತಿದ್ದಂತೆ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದರು.
Previous Articleಅಕ್ರಮ ಚಿನ್ನ -ಶಶಿ ತರೂರ್ ಆಪ್ತ ಬಂಧನ..
Next Article ಪ್ರಜ್ವಲ್ ರೇವಣ್ಣ ಬಂಧನ ಖಾಯಂ.