ಬೆಂಗಳೂರು,ಜೂ.18-
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಕ್ರಮಗಳ ಆಗರವಾಗಿದೆ ಇಲ್ಲಿ ಒಂದು ಕೆಲಸಕ್ಕೆ ಎರಡು ಬಿಲ್ ಮಾಡಿಕೊಂಡು ಕೋಟ್ಯಂತರ ರೂ. ಲೂಟಿ ಮಾಡಲಾಗುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿಗಳಲ್ಲಿನ ಹಣ ಎಲ್ಲಿ ಹೋಗಿದೆಯೋ, ಏನೋ? ಅದನ್ನು ಕೇಳೋರು ಇಲ್ಲ,ಹಲವಾರು ಇಲಾಖೆಯಲ್ಲಿ ಹಣ ಸೋರಿಕೆಯಾಗುತ್ತಿದೆ.ಜನರ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿಕೊಂಡು ಕೂತಿದೆ ಎಂದು ವಾಗ್ದಾಳಿ ನಡೆಸಿದರು.
ಇದೀಗ ಬೆಂಗಳೂರಿನ 25 ಸಾವಿರ ಎಕರೆ ಮೇಲೆ ರಾಜ್ಯಸರ್ಕಾರ ಕಣ್ಣು ಹಾಕಿದೆ. ಗ್ಯಾರಂಟಿಯಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವಾಗ ವಿವೇಕ ಇರಲಿಲ್ಲವೇ?, ಯಾವ ರೀತಿ ಅನುಷ್ಠಾನ ಮಾಡಬೇಕು ಎಂಬುದರ ಬಗ್ಗೆ ಚಿಂತೆ ಮಾಡಬೇಕಿತ್ತಲ್ಲವೇ?, ಹಣಕಾಸು ಸಚಿವರಾಗಿ 14 ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನುಭವ ಇರಲಿಲ್ಲವೇ?, ಮುಂದೇನಾಗಬಹುದು ಎಂಬ ಆಲೋಚನೆಯನ್ನೂ ಮಾಡಲಿಲ್ಲವೇ?, ಎಂದು ಟೀಕಾ ಪ್ರಹಾರ ನಡೆಸಿದರು.
ಈಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಉಪಕರವನ್ನು ಹೆಚ್ಚಳ ಮಾಡುವ ಅವಶ್ಯಕತೆ ಏನಿತ್ತು. ಪೆಟ್ರೋಲ್, ಡೀಸೆಲ್ ದರವನ್ನು ಕೇಂದ್ರಸರ್ಕಾರ ಕಡಿಮೆ ಮಾಡಬೇಕೆಂದು ಮುಖ್ಯಮಂತ್ರಿಯವರು ಒತ್ತಾಯಿಸಿದ್ದಾರೆ. ಕೇಂದ್ರಸರ್ಕಾರ ದರ ಇಳಿಸುವುದು ಅಥವಾ ಬಿಡುವುದರ ಬಗ್ಗೆ ಆಮೇಲೆ ಚರ್ಚಿಸೋಣ. ಈಗ ತರಾತುರಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುವುದರ ಅಗತ್ಯವೇನಿತ್ತು? ಯಾವ ಕಾರಣಕ್ಕಾಗಿ ಹೆಚ್ಚಳ ಮಾಡಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆಗೈದರು.
ಕೇಂದ್ರ ಸರ್ಕಾರವನ್ನು ಬೆಲೆ ಇಳಿಸುವಂತೆ ಇಷ್ಟು ದಿನ ಏಕೆ ಕೇಳಲಿಲ್ಲ? ಸರ್ಕಾರದಲ್ಲಿ ಹಣದ ಕೊರತೆ ಉಂಟಾಗಿರುವುದರಿಂದ ಸೆಸ್ ಮೂಲಕ 3 ಸಾವಿರ ಕೋಟಿ ರೂ. ಸಂಗ್ರಹಿಸಲು ತೈಲಬೆಲೆ ಹೆಚ್ಚಳ ಮಾಡಿದ್ದೀರ. ಜನರ ಜೇಬಿನಿಂದ ಕಿತ್ತುಕೊಳ್ಳಲು ಹೊರಟಿದ್ದೀರ. ಗ್ಯಾರಂಟಿ ಅನುಷ್ಠಾನಗೊಳಿಸುವುದಾಗಿ ಹೇಳಿ ಜನರಿಂದ ತೆಗೆದುಕೊಂಡು, ಜನರಿಗೇ ಕೊಡುವುದಕ್ಕೆ ನೀವೇ ಬೇಕಾ? ಯಾರು ಬೇಕಾದರೂ ಇಂತಹ ಆಡಳಿತ ನಡೆಸುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
Previous Articleಭವಾನಿ ರೇವಣ್ಣ ಅವರಿಗೆ ಜಾಮೀನು ಸಿಕ್ತು.
Next Article ರಾಜ್ಯ ಕಂಡ ಅಸಮರ್ಥ ಸಿಎಂ ಸಿದ್ದರಾಮಯ್ಯ.