ಬೆಂಗಳೂರು, ಜೂ.26:
ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ವಿದ್ಯಮಾನಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರತಿ ಪಕ್ಷ ಬಿಜೆಪಿಯಲ್ಲೂ ಕುತೂಹಲಕರ ಬೆಳವಣಿಗೆಗಳು ನಡೆಯುತ್ತಿವೆ.
ವಿಧಾನಪರಿಷತ್ ಪ್ರತಿ ಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪಕ್ಷದ ರಾಜ್ಯ ಅಧ್ಯಕ್ಷ ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೊಸ ತಂತ್ರವೊಂದನ್ನು ರೂಪಿಸಿದ್ದು ಅದು ಯಾವತ್ತಿರುವು ಪಡೆದುಕೊಳ್ಳು ತ್ತದೆ ಎಂಬ ಅಂಶ ಕುತೂಹಲ ಮೂಡಿಸಿದೆ.
ಇಲ್ಲಿಯವರೆಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡುತ್ತಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನ ತೆರವುಗೊಂಡಿದೆ. ಈ ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದಾರೆ.ಇದರಲ್ಲಿ ಪ್ರಮುಖವಾಗಿ ಮೊನ್ನೆಯಷ್ಟೇ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸಚಿವ ಸಿ.ಟಿ.ರವಿ ಪ್ರಮುಖರಾಗಿದ್ದಾರೆ.
ಆದರೆ ಹಲವಾರು ಕಾರಣದಿಂದಾಗಿ ಸಿ.ಟಿ.ರವಿ ಅವರಿಗೆ ಈ ಹುದ್ದೆ ಸಿಗದಂತೆ ನೋಡಿಕೊಳ್ಳಲು ಆರ್ .ಅಶೋಕ್ ಮತ್ತು ವಿಜಯೇಂದ್ರ ತಂತ್ರ ರೂಪಿಸಿದ್ದಾರೆ.
ಸಿ.ಟಿ.ರವಿ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು,ಸಂಘ ಪರಿವಾರದ ಪ್ರಮುಖ ನಾಯಕರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇದು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಲಿದೆ ಎನ್ನುವುದು ಈ ಇಬ್ಬರೂ ನಾಯಕರ ಲೆಕ್ಕಾಚಾರವಾಗಿದೆ.ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷ ನಾಯಕನ ಹುದ್ದೆಯನ್ನು ಸಿ.ಟಿ.ರವಿ ಅವರಿಗೆ ಸಿಗದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ.
ಸದ್ಯ ವಿಧಾನಸಭೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಪ್ರತಿಪಕ್ಷ ನಾಯಕ ಹುದ್ದೆ ನೀಡಲಾಗಿದೆ.ಹೀಗಾಗಿ ಪರಿಷತ್ ನಲ್ಲಿ ದಲಿತ ಅಥವಾ ಹಿಂದುಳಿದ ಸಮುದಾಯಕ್ಕೆ ಈ ಹುದ್ದೆ ನೀಡಬೇಕೆಂದು ವಾದ ಮಂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬೀಡು ಬಿಟ್ಟಿರುವ ವಿಜಯೇಂದ್ರ ಪಕ್ಷದ ನಾಯಕರನ್ನು ಭೇಟಿ ಮಾಡಿ,ಪರಿಷತ್ ನಲ್ಲಿ ಪ್ರತಿಪಕ್ಷ ನಾಯಕರಾಗಿ ದಲಿತ ಬಲಗೈ ಸಮುದಾಯಕ್ಕೆ ಸೇರಿದ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಬೇಕು. ಇಲ್ಲವಾದರೆ ಎರಡನೇ ಬಾರಿಗೆ ಪರಿಷತ್ ಸದಸ್ಯರಾಗಿರುವ ಹಿಂದುಳಿದ ಸಮುದಾಯಕ್ಕೆ ಸೇರಿದ ರವಿಕುಮಾರ್ ಅವರನ್ನು ನೇಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಮತ್ತೊಂದೆಡೆ ಸಂಘ ಪರಿವಾರದ ಹಿರಿಯ ನಾಯಕ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಈ ಹುದ್ದೆಯನ್ನು ಸಿ.ಟಿ.ರವಿ ಅವರಿಗೆ ಕೊಡಿಸಲು ಲಾಭಿ ನಡೆಸಿದ್ದಾರೆ. ಸದ್ಯ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡುತ್ತಿರುವ ಅಶೋಕ್ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ.ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬದಲಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂಬ ಅನುಮಾನಬರುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಇದನ್ನು ದೂರೀಕರಿಸಿ ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡಲು ಸಿ.ಟಿ.ರವಿ ಅವರಂತಹ ಪ್ರಬಲರ ಅಗತ್ಯವಿದೆ ಎಂದು ಪ್ರತಿಪಾಸುತ್ತಿದ್ದು,ವಿದ್ಯಮಾನಗಳು ಕುತೂಹಲ ಮೂಡಿಸಿದೆ.
Previous Articleಡ್ರಗ್ಸ್ ವಿರುದ್ಧ ಸಿಡಿದೆದ್ದ ಸರ್ಕಾರ.
Next Article Honey tapper ಬಗ್ಗೆ ಮಾಹಿತಿ ಕೊಟ್ಟ ಶಾಸಕ.