ನವದೆಹಲಿ,ಜು.1-ಬ್ರಿಟಿಷ್ ವಸಾಹತು ಕಾಲದ ಕ್ರಿಮಿನಲ್ ಕಾನೂನುಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು,ಇಂದು ಜಾರಿಗೆ ತಂದಿರುವ ಹೊಸ ಕಾನೂನಿನ ಅನ್ವಯ ನಗರದ ರೈಲ್ವೆ ನಿಲ್ದಾಣದ ಬಳಿ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬೀದಿ Businessಿಯ ವಿರುದ್ಧ ಮೊದಲ ಎಫ್ಐಆರ್ ದಾಖಲಿಸಲಾಗಿದೆ.
ಹೊಸ ಕ್ರಿಮಿನಲ್ ಕೋಡ್‌ನ ಸೆಕ್ಷನ್ 285ರ ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದ್ದು, ಈ ಕಾನೂನಿನ ಪ್ರಕಾರ ಯಾವುದೇ ಸಾರ್ವಜನಿಕ ರಸ್ತೆಗೆ ಅಡ್ಡಿಪಡಿಸಿದರೆ ಅಥವಾ ಸಾರ್ವಜನಿಕ ಮಾರ್ಗದಲ್ಲಿ ಸಂಚರಿಸುವ ಯಾವುದೇ ವ್ಯಕ್ತಿಗೆ ಅಪಾಯ ಅಥವಾ ಗಾಯವನ್ನು ಉಂಟು ಮಾಡಿದರೆ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.
ರೈಲ್ವೆ ನಿಲ್ದಾಣದ ಬಳಿ ನಿನ್ನೆ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ರಸ್ತೆಯಲ್ಲಿ ನೀರಿನ ಬಾಟಲಿಗಳು ಮತ್ತು ಗುಟ್ಕಾ ಮಾರಾಟ ಮಾಡುವ ಬೀದಿ ವ್ಯಾಪಾರಿಯನ್ನು ಗುರುತಿಸಿದ ನಂತರ ಎಫ್ಐಆರ್ ದಾಖಲಿಸಲಾಗಿದೆ. ಬೀದಿ ವ್ಯಾಪಾರಿಯ ತಾತ್ಕಾಲಿಕ ಅಂಗಡಿಯು ರಸ್ತೆಗೆ ಅಡ್ಡವಾಗಿ ನಿಂತಿತ್ತು. ಅದನ್ನು ಸ್ಥಳಾಂತರಿಸಲು ಪೊಲೀಸ್ ಸಿಬ್ಬಂದಿ ಕೇಳಿಕೊಂಡರೂ ಒಪ್ಪದೇ ಇದ್ದಾಗ ಎಫ್ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್‌ನಲ್ಲಿ ಏನಿದೆ:
ಬೀದಿ ಬದಿ ವ್ಯಾಪಾರಿ ರಾತ್ರಿ ನವದೆಹಲಿ ರೈಲ್ವೆ ನಿಲ್ದಾಣದ ಬಳಿಯ ಪಾದಚಾರಿ ಮೇಲ್ಸೇತುವೆಯ ಕೆಳಗೆ ತನ್ನ ಅಂಗಡಿಯನ್ನು ನಿಲ್ಲಿಸಿದ್ದ ಎಂದು ಹೇಳಲಾಗಿದೆ.ಆ ವ್ಯಾಪಾರಿಯು ಬೀದಿಯಲ್ಲಿ ನೀರಿನ ಬಾಟಲಿ, ಬೀಡಿ ಮತ್ತು ಸಿಗರೇಟುಗಳನ್ನು ಮಾರಾಟ ಮಾಡುತ್ತಿದ್ದ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಆತನ ಅಂಗಡಿ ಅಡ್ಡಿಯಾಗುತ್ತಿತ್ತು. ರಸ್ತೆಯಿಂದ ಅಂಗಡಿಯನ್ನು ತೆರವುಗೊಳಿಸುವಂತೆ ಸಬ್ ಇನ್ಸ್‌ಪೆಕ್ಟರ್ ಆ ವ್ಯಾಪಾರಿ ಬಳಿ ಹಲವು ಬಾರಿ ಮನವಿ ಮಾಡಿದರು. ಆದರೆ ಆತ ಅದಕ್ಕೆ ಒಪ್ಪಲಿಲ್ಲ” ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ವ್ಯಾಪಾರಿಯನ್ನು ಬಿಹಾರದ ಪಾಟ್ನಾ ಮೂಲದ ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ.
ಏನಿದು ಹೊಸ ಕಾನೂನು:
ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗಿದೆ. ಮೂರು ಕ್ರಿಮಿನಲ್ ಕಾನೂನುಗಳನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಿತು. ಆದರೆ ಅವು ಜಾರಿಗೆ ಬಂದಿರಲಿಲ್ಲ. ಈ ವರ್ಷ ಫೆಬ್ರವರಿ 25ರಂದು ಮೂರು ಕಾನೂನುಗಳು ಜುಲೈ 1ರಂದು ಜಾರಿಗೆ ಬರುತ್ತವೆ ಎಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತ್ತು.
ಭಾರತೀಯ ನ್ಯಾಯ ಸಂಹಿತಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆಯು ಇವೇ ಆ ಮೂರು ಹೊಸ ಕಾನೂನುಗಳಾಗಿವೆ.
ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷಿ ಕಾಯಿದೆಗೆ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಎಂದು ಬದಲಿಸಲಾಗಿದೆ
Previous Articleಪಂಚಾಯಿತಿಗಳಲ್ಲಿ ಜನನ- ಮರಣ ಪ್ರಮಾಣ ಪತ್ರ.
Next Article ಪೊಲೀಸರಿಗೆ ಸಿಕ್ಕ ಸಿಹಿ ಸುದ್ದಿ ಏನು.?