ಬೆಂಗಳೂರು,ಜು.11-
ನಿಗಧಿತ ಆದಾಯ ಮೂಲ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿ ಗಳಿಸಿರುವ ಆರೋಪದಲ್ಲಿ ಸರ್ಕಾರಿ ಅಧಿಕಾರಿಗಳು,ನಿವೃತ್ತ ಅಧಿಕಾರಿಗಳ ಕಚೇರಿ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.
ಕಲಬುರಗಿ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ ಸೇರಿ 9 ಜಿಲ್ಲೆಗಳ 56 ಕಡೆಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸೇವೆಯಲ್ಲಿರುವ ಹಾಗೂ ನಿವೃತ್ತ ಅಧಿಕಾರಿಗಳ ಅಕ್ರಮ ಆಸ್ತಿಪಾಸ್ತಿಯ ದಾಖಲೆಗಳ ಪತ್ರಗಳ ಪರಿಶೀಲನೆ ಕೈಗೊಂಡಿದ್ದಾರೆ.
ಕೋಲಾರದ ತಹಶೀಲ್ದಾರ್ ವಿಜಯಣ್ಣ, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರ, ಜಲ ಸಂಪನ್ಮೂಲ ಇಲಾಖೆಯ ಮೈಸೂರು ಸೂಪರಿಂಟೆಂಡಿಂಗ್ ಎಂಜಿನಿಯರ್ ಮಹೇಶ್ ಕೆ., ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆ.ಜಿ. ಜಗದೀಶ್, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಶಿವರಾಜು ಎಸ್., ಬಿಬಿಎಂಪಿ ಕೆಂಗೇರಿ ವಲಯದ ಕಂದಾಯ ಅಧಿಕಾರಿ ಬಸವರಾಜ ಮಾಗಿ, ದಾವಣಗೆರೆಯ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಚ್. ಉಮೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್, ಪ್ರಭಾಕರ, ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ್ ಬೆನ್ನೂರು, ಹಾಸನದ ಗ್ರಾಮ ಪಂಚಾಯಿತಿಯೊಂದರ ಗ್ರೇಡ್-1 ಕಾರ್ಯದರ್ಶಿ ಎನ್.ಎಂ. ಜಗದೀಶ್ ಅವರನ್ನು ಬಲೆಗೆ ಕೆಡವಿ ಅವರುಗಳ ಕಚೇರಿ, ಮನೆ, ಸಂಬಂಧಿಸಿದವರ ಮನೆಗಳು, ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.
ಧಾರವಾಡದಲ್ಲಿ ಎರಡು ಕಡೆ ಪಿಜಿಗಳನ್ನು ಹೊಂದಿರುವ ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಮನೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಧಾರವಾಡದಕೆಸಿಡಿ ರಸ್ತೆಯ ಸಪ್ತಾಪುರ ಹಾಗೂ ರಾಧಾಕೃಷ್ಣ ನಗರದಲ್ಲಿ ಶೇಖರಗೌಡರ ಪಿಜಿಗಳಿದ್ದು, ಎರಡೂ ಸ್ಥಳಗಳಲ್ಲೂ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ರಾಮನಗರದಲ್ಲಿ ದಾಳಿ:
ಜಿಲ್ಲೆಯ ಆರೋಹಳ್ಳಿ ತಹಶೀಲ್ದಾರ್ ವಿಜಿಯಣ್ಣ ಅವರಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ದಾಳಿ ನಡೆದಿದೆ. ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗು ತುಮಕೂರಿನ ತಲಾ ಎರಡು ಸ್ಥಳಗಳು, ರಾಮನಗರದ ಆರೋಹಳ್ಳಿ ಹಾಗೂ ಮಂಡ್ಯದ ಒಂದೆಡೆ ದಾಳಿ ನಡೆಸಲಾಗಿದೆ. ವಿಜಿಯಣ್ಣ ಈ ಮೊದಲು ಕೋಲಾರ ತಹಶೀಲ್ದಾರ್ ಆಗಿದ್ದರು. ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಕಲಬುರಗಿಯಲ್ಲಿ ದಾಳಿ:
ಬಿಬಿಎಂಪಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ್ ಮಾಗಿ ಅವರ ಬೆಂಗಳೂರು ಹಾಗು ಕಲಬುರಗಿಯ ಎಂ.ಬಿ.ನಗರದಲ್ಲಿರುವ ನಿವಾಸದ ಮೇಲೂ ದಾಳಿ ನಡೆದಿದೆ.
ಬೆಳಗಾವಿಯ ಜಿಲ್ಲಾ ಪಂಚಾಯತಿ ಎಇಇ ದುರದುಂಡೇಶ್ವರ ಬನ್ನೂರ ಅವರಿಗೆ ಸೇರಿದ ಸೇರಿದ ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಗೋಕಾಕ, ಹೊನಗಾ, ಹಿಂಡಲಗಾ ಹಾಗೂ ಯಳ್ಳೂರ ಸೇರಿ 4 ಕಡೆ ದಾಳಿ ನಡೆದಿದೆ. ಗೋಕಾಕದ ನಿವಾಸ, ಹೊನಗಾ ಫಾರ್ಮ್ ಹೌಸ್, ಯಳ್ಳೂರು ಮನೆ ಹಿಂಡಲಗಾ ಅಪಾರ್ಟ್ ಮೆಂಟ್ಗಳಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ. ನಾಲ್ಕು ತಿಂಗಳ ಹಿಂದಷ್ಟೇ ಲೋಕಾಯುಕ್ತ ಅಧಿಕಾರಿಗಳು ಮಹಾದೇವ ಬನ್ನೂರ ಮೇಲೆ ದಾಳಿ ಮಾಡಿದ್ದರು. ಗುತ್ತಿಗೆದಾರರಿಂದ ಹಣಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದರು.
ಸಿಕ್ಕಿಬಿದ್ದಿದ್ದರು.
ಮಂಡ್ಯದಲ್ಲಿ ಪರಿಶೀಲನೆ:
ನಗರದ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವರಾಜು ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಎಸ್‌ಪಿ ಸುರೇಶ್ ಬಾಬು ನೇತೃತ್ವದ ತಂಡ ನಗರ ಸೇರಿದಂತೆ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಇಜ್ಜಲಘಟ್ಟ ಗ್ರಾಮದ ಮನೆ, ಫಾರ್ಮ್‌ಹೌಸ್, ಕ್ರಷರ್ ಹಾಗೂ ಮೈಸೂರಿನ ಶಿವರಾಜು ಅಳಿಯನ ಮನೆ ಸೇರಿದಂತೆ ವಿವಿಧೆಡೆ ಪರಿಶೀಲನೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Previous Articleಮಗನನ್ನು ಕಂಡು ಕಣ್ಣೀರು ಹಾಕಿದ ಡಿ ಬಾಸ್.
Next Article ED ವಿಚಾರಣೆಗೆ ಬೆಚ್ಚಿದ ನಾಗೇಂದ್ರ, ದದ್ದಲ್.