ಬೆಂಗಳೂರು, ಜು.30:
ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಆರೋಪ ಪ್ರಕರಣಗಳು ಕಾಂಗ್ರೆಸ್ ಹೈಕಮಾಂಡ್ ಅನ್ನು ಚಿಂತೆಗೀಡು ಮಾಡಿದೆ.
ಎಲ್ಲ ರಾಜ್ಯಗಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ಈ ವಿಷಯದ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದ್ಯಮಾನಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.
ಬಿಜೆಪಿಯ ಭ್ರಷ್ಟಾಚಾರ ಆರೋಪಗಳ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರೀತಿಯ ಹೋರಾಟಕ್ಕೆ ಸಜ್ಜುಗೊಂಡಿರುವ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಈ ಆರೋಪಗಳು ಮುಜುಗರ ಉಂಟು ಮಾಡುತ್ತಿವೆ ಎಂದು ಹೇಳಲಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಬಿಜೆಪಿ ನಾಯಕರು ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಇದು ಕಾಂಗ್ರೆಸ್ ನಾಯಕರಿಗೆ ಇರಿಸು ಮುರಿಸು ಉಂಟು ಮಾಡುತ್ತಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳು ತಿಳಿಸಿವೆ.
ಈ ವಿಷಯಗಳನ್ನು ಇಟ್ಟುಕೊಂಡು ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಉದ್ದೇಶಿಸಿರುವ ಬಗ್ಗೆ ರಾಜ್ಯ ನಾಯಕರಿಂದ ಮಾಹಿತಿ ಪಡೆದುಕೊಂಡಿರುವ ರಾಹುಲ್ ಗಾಂಧಿ ಇದರಿಂದ ಪಕ್ಷದ ವರ್ಚಸ್ಸಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿರುವುದಾಗಿ ಗೊತ್ತಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ ಹಲವಾರು ಅಕ್ರಮಗಳ ಆರೋಪಗಳು ಕೇಳಿಬಂದಿದ್ದವು. ಆದರೆ ಈಗಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಇಲ್ಲಿಯವರೆಗೆ ಈ ಯಾವುದೇ ಆರೋಪಗಳ ಬಗ್ಗೆ ತನಿಖೆ ನಡೆಸುವ ಇಲ್ಲವೇ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಇಬ್ಬರೂ ನಾಯಕರು ಕರ್ನಾಟಕಕ್ಕೆ ಹಿಂತುರುಗಿದ ಕೂಡಲೇ ಸಂಪುಟ ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವಂತೆ ಸೂಚಿಸಿದರು ಎಂದು ಗೊತ್ತಾಗಿದೆ.
ಕುಮಾರಸ್ವಾಮಿ ತಂತ್ರ:
ಈ ವೇಳೆ ಎರಡು ಹಗರಣಗಳ ಕುರಿತಂತೆ ಸುಧೀರ್ಘ ವಿವರಣೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಸಚಿವ ಕುಮಾರಸ್ವಾಮಿ ರೂಪಿಸಿರುವ ತಂತ್ರ ಇದಾಗಿದೆ ಎಂದು ಹೇಳಿದ್ದಾರೆ.
ಉಪಚುನಾವಣೆಯಲ್ಲಿ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿರುವ ಕುಮಾರಸ್ವಾಮಿ ಅವರು ಈ ಎರಡು ಆರೋಪಗಳನ್ನು ಇಟ್ಟುಕೊಂಡು ಪಾದಯಾತ್ರೆ ಮಾಡುವ ಮೂಲಕ ತಮ್ಮ ಪುತ್ರನನ್ನು ನಾಯಕನನ್ನಾಗಿ ಬಿಂಬಿಸಲು ಹೊರಟಿದ್ದಾರೆ ಸದ್ಯದಲ್ಲೇ ಕುಮಾರಸ್ವಾಮಿ ತಮ್ಮ ಪುತ್ರನಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಕಟ್ಟುತ್ತಿದ್ದಾರೆ ಅದಕ್ಕಾಗಿ ಈ ಪಾದಯಾತ್ರೆಯ ತಂತ್ರ ರೂಪಿಸಿದ್ದಾರೆ.
ಕುಮಾರಸ್ವಾಮಿಯವರ ಪುತ್ರನನ್ನು ನಾಯಕನನ್ನಾಗಿ ಮಾಡಲು ಹೊರಟಿರುವ ಈ ಹೋರಾಟಕ್ಕೆ ಅವರು ಬಿಜೆಪಿಯನ್ನು ಬಳಸಿಕೊಳ್ಳುತ್ತಿದ್ದಾರೆ ಇದರ ವಿರುದ್ಧ ನಾವು ಕೂಡ ರಾಜಕೀಯ ಹೋರಾಟ ಮಾಡಬಹುದಾಗಿದೆ ಈ ಸಂಬಂಧ ತಾವು ಈಗಾಗಲೇ ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದೇನೆ.ಮಂತ್ರಿಗಳು ಕೂಡ ಹಲವು ಸಲಹೆಗಳನ್ನು ನೀಡಿದ್ದು ಆ ಎಲ್ಲವನ್ನು ಕಾರ್ಯರೂಪಕ್ಕೆ ತರುವ ಮೂಲಕ ಜೆಡಿಎಸ್ ಮತ್ತು ಬಿಜೆಪಿ ರೂಪಿಸಿರುವ ರಾಜಕೀಯ ತಂತ್ರಕ್ಕೆ ತಕ್ಕ ಎದುರೇಟು ನೀಡುತ್ತೇವೆ ಎಂದು ಸಮಜಾಯಿಸಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.
Previous Articleರಾಜ್ಯ ಸರ್ಕಾರವನ್ನು ಭ್ರಷ್ಟ ಎಂದು ಬಿಂಬಿಸುವ ಯತ್ನ.
Next Article ಸಿದ್ದರಾಮಯ್ಯ ವಿರುದ್ಧ ಕಾನೂನು ಕುಣಿಕೆ.