ಬೆಂಗಳೂರು,ಅ.1:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡಿರುವ ನಿವೇಶನ ವಾಪಸ್ ಪಡೆಯುವಂತೆ ಪತ್ರ ಬರೆದಿರುವ ಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೂ ಟರ್ನ್ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಕೇಂದ್ರ ಉಕ್ಕು ಖಾತೆ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಡಾ ಹಗರಣ ಮಾತ್ರವಲ್ಲ ಸಿದ್ದರಾಮಯ್ಯ ಇನ್ನೂ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ. ಈ 14 ಸೈಟ್ ಕಥೆ ಒಂದಾದರೆ ಇದು ಅದಕ್ಕಿಂತ ಹಳೆ ನಿವೇಶನದ ಕತೆ ಒಂದಿದೆ.ಆ ಪ್ರಕರಣ ಕುತ್ತಿಗೆಗೆ ಬಂದಾಗ ಒಂದು ಕೋಟಿ ರೂಪಾಯಿಗೆ ಮಾರಾಟ ಮಾಡಿಕೊಂಡರು. ಚುನಾವಣಾ ಸಾಲಕ್ಕಾಗಿ ಅದನ್ನು ಮಾರಾಟ ಮಾಡಲಾಯಿತು ಎಂದು ಕಥೆ ಕಟ್ಟಿದ್ದರಲ್ಲ, ಆ ನಿವೇಶನ ಎಲ್ಲಿಂದ ಬಂದಿತ್ತು ಸ್ವಲ್ಪ ಹೇಳುವಿರಾ ಎಂದು ಪ್ರಶ್ನಿಸಿದರು.
ಬಡವರ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿಸಿಕೊಂಡು, ಅದನ್ನು ಸಿದ್ದರಾಮಯ್ಯ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿಯೂ ಸಿದ್ದರಾಮಯ್ಯ ಮೊದಲ ಆರೋಪಿ.ಇದರಲ್ಲಿ ಒಟ್ಟು 18 ಆರೋಪಿಗಳಿದ್ದಾರೆ. ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದಿದೆ. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೋದರು. ಅಲ್ಲಿ ಪರ ತೀರ್ಪು ಬಂತು. ಇದು 14 ಸೈಟ್‌ಗಿಂತ ದೊಡ್ಡ ಹಗರಣ ಎಂದು ಹೇಳಿದರು.
ಈ ನಿವೇಶನದಿಂದ ದೊಡ್ಡ ಸಮಸ್ಯೆ ಬಂದಿದ್ದಕ್ಕೆ ಚುನಾವಣಾ ಖರ್ಚಿನ ಹೆಸರಿನಲ್ಲಿ ಮಾರಾಟ ಮಾಡಿದರು. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯುವುದು ಎಂದರೆ ಇದೇ. ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮನ್ನು ಮುಗಿಸಲು ಹೊರಟರು’ ಎಂದು ಕಿಡಿಕಾರಿದರು.
ಮೈಸೂರಿನಲ್ಲಿ ಭೂಮಿ ಮೇಲೆ, ಚಿನ್ನದ ಮೇಲೆ ವ್ಯಾಮೋಹ ಇಲ್ಲ ಎನ್ನುತ್ತಾರೆ ಅವರ ಶ್ರೀಮತಿಯವರು. ಈ ಹಿಂದೆ ಏನೆಲ್ಲ ಮಾಡಿದ್ದಾರೆ, ವೈಟ್ನರ್ ಹಾಕಿ ಎಲ್ಲ ಮುಗಿದೊಯ್ತು ಎಂದುಕೊಂಡಿದ್ದರು, ಈಗ ಇಲ್ಲಿಗೆ ಬಂದಿದ್ದಾರೆ’ ಎಂದರು.
ಊರಿಗೆ ಬುದ್ದಿ ಹೇಳೊರು ಇಲ್ಲಿ ಏನೇನು ಮಾಡಿದ್ದಿರಿ, ಸತ್ಯ ಹೇಳಿ. ಈಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಇನ್ನು ಎರಡು ಪ್ರಕರಣಗಳಿವೆ’ ಎಂದು ಅವರು ಆರೋಪಿಸಿದರು.
Previous Article56 ವರ್ಷಗಳ ನಂತರ ಸಿಕ್ಕ ಮೃತ ದೇಹಗಳು.
Next Article ಆತ್ಮಸಾಕ್ಷಿಯಂತೆ ಕೆಲಸ ಮಾಡುವ ಸಿಎಂ.