Bengaluru
ರಾಜ್ಯ ವಿಧಾನಸಭೆಯ ಮೂರೂ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಯಾಸಿರ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಿದೆ.
ಈ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಸತತವಾಗಿ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಬಾರಿ ಇವರಿಗೆ ಸೋಲು ಉಣಿಸಬೇಕು ಎಂದು ಕಾಂಗ್ರೆಸ್ಸಿನ ನಾಯಕರು ರಣತಂತ್ರ ರೂಪಿಸಿ ಈ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿ ಬದಲಿಗೆ ಹಿಂದು ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಅದರಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಚರ್ಚೆ ನಡೆಸಿದ್ದರು.
ಅದರಲ್ಲೂ ಮಾಜಿ ಸಂಸದ ಮಂಜುನಾಥ ಕುನ್ನೂರು ಅವರ ಪುತ್ರ ರಾಜು ಕುನ್ನೂರು, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅಥವಾ ಪುತ್ರಿ ವೈಶಾಲಿ ಕುಲಕರ್ಣಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಚರ್ಚೆ ನಡೆದಿತ್ತು. ಇನ್ನೇನು ಇವರಲ್ಲಿ ಯಾರಾದರೂ ಒಬ್ಬರು ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಭಾವಿಸಲಾಗಿತ್ತು.
ಆದರೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮ ಸುತ್ತು ತಲುಪಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ವಾದ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು. ಈ ಚುನಾವಣೆಯ ಫಲಿತಾಂಶದಿಂದ ಸರ್ಕಾರದ ಭವಿಷ್ಯಕ್ಕೆ ಯಾವುದೇ ತೊಂದರೆ ಇಲ್ಲ ಆದರೆ ಚುನಾವಣೆ ಸ್ಪರ್ಧೆ ವಿಷಯ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ತೋರಿಸಲು ಸಿಕ್ಕಿರುವ ಅವಕಾಶ ಎಂದು ಭಾವಿಸಬೇಕು ಈ ಮೂಲಕ ಪಕ್ಷದ ತತ್ವ ಮತ್ತು ಸಿದ್ದಾಂತದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶ ರವಾನಿಸಬೇಕು ಎಂದು ಹೇಳಿದರು.
ಇತ್ತೀಚಿನ ದಿನಮಾನಗಳಲ್ಲಿ ಮೀಸಲು ಕ್ಷೇತ್ರವನ್ನು ಹೊರತುಪಡಿಸಿ ಇತರೆ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಹಿಂದುಳಿದ ಮತ್ತು ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಿ ಗೆಲ್ಲುವ ಅವಕಾಶ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ತುಮಕೂರಿನ ತುರುವೇಕೆರೆ ಶಿರಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರು ಆದರೆ ಇದೀಗ ಬದಲಾದ ಲೆಕ್ಕಾಚಾರದಲ್ಲಿ ಅಲ್ಲಿ ಪ್ರಬಲ ಸಮುದಾಯದವರೇ ಆಯ್ಕೆಯಾಗುವಂತಾಗಿದೆ ಅದೇ ರೀತಿಯಲ್ಲಿ ಶಿಗ್ಗಾವಿ ಕ್ಷೇತ್ರ ಮೊದಲಿನಿಂದಲೂ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಕ್ಷೇತ್ರವಾಗಿದೆ ಅದು ಈಗ ಬದಲಾದರೆ ಈ ಸಮುದಾಯಕ್ಕೆ ಕ್ಷೇತ್ರವೇ ಇಲ್ಲದಂತಾಗುತ್ತದೆ ಎಂದು ಹೇಳಿದರು ಎನ್ನಲಾಗಿದೆ.
ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿ ಅಥವಾ ಸೋಲಲಿ ಆ ಕ್ಷೇತ್ರವನ್ನು ಅಲ್ಪಸಂಖ್ಯಾತರಿಗೆ ನೀಡುವ ಮೂಲಕ ಪಕ್ಷದ ಸಾಮಾಜಿಕ ನ್ಯಾಯದ ಬದ್ಧತೆಯನ್ನು ತಿಳಿಸಬೇಕು. ಹೀಗಾಗಿ ಎಂದಿನಂತೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಎಲ್ಲರ ಮನವೊಲಿಸಿದರು ಎನ್ನಲಾಗಿದೆ. ಅಂತಿಮವಾಗಿ ಈ ವಿಷಯ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯಾಗಿ ವರಿಷ್ಠ ನಾಯಕರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಪರಿಣಾಮ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ ಯಾಸಿರ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.