ಬೆಂಗಳೂರು,ನ.4:
ವಕ್ಫ್ ಆಸ್ತಿ ಕಬಳಿಕೆ ತೆರವು ಕಾರ್ಯಾಚರಣೆ ಹೆಸರಿನಲ್ಲಿ ರಾಜ್ಯದ ರೈತರ ಭೂಮಿಯನ್ನು ಕಸಿದುಕೊಳ್ಳಲು ರಾಜ್ಯ ಸರ್ಕಾರ ಸಂಚು ರೂಪಿಸಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ಪಕ್ಷದ ರಾಜ್ಯ ಘಟಕದ ಕರೆಯ ಮೇರೆಗೆ ಎಲ್ಲ ತಾಲೂಕು ಕೇಂದ್ರ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ತಕ್ಷಣವೇ ವಕ್ಫ್ ಆಸ್ತಿ ತೆರವು ಕಾರ್ಯಾಚರಣೆ ನಿಲ್ಲಿಸಬೇಕು ಎಲ್ಲಾ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಗೊಳಿಸಬೇಕು ಎಂದು ಆಗ್ರಹಿಸಿದರು.
ಲ್ಯಾಂಡ್ ಜಿಹಾದ್ :
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಮೂಲಕ ಮತಾಂತರ ಮಾಡಿದಂತೆ ಈಗ ಸಚಿವ ಜಮೀರ್ ಅಹಮದ್ ಖಾನ್ ಅವರು ವಕ್್ಫ ಮೂಲಕ ಹಿಂದೂಗಳ ಭೂಮಿ ಕಬಳಿಸಲು ಕಾಂಗ್ರೆಸ್ ಲ್ಯಾಂಡ್ ಜಿಹಾದ್ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯ ಸರ್ಕಾರ ಅನ್ನದಾತರ ತಲೆ ಮೇಲೆ ಚಪ್ಪಡಿಕಲ್ಲು ಎಳೆದಿದೆ. ಜಮೀರ್ ರೈತರ ಜಮೀನು ಕಬಳಿಕೆಗೆ ಮುಂದಾಗಿದ್ದಾರೆ. ರೈತರ ಜಮೀನು ಕಬಳಿಸಲು ಹುನ್ನಾರ ನಡೆದಿದೆ. 1974ರಲ್ಲಿ ಆವತ್ತಿನ ಕಾಂಗ್ರೆಸ್ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ, ಇದು ರದ್ದಾಗಬೇಕು ಎಂದು ಆಗ್ರಹಿಸಿದರು.
ಈ ನೋಟಿಫಿಕೇಷನ್ ಮುಸಲಾನರ ಓಲೈಕೆಗಾಗಿ ಮಾಡಲಾಗಿದೆ. ಸಿದ್ದರಾಮಯ್ಯ ಎಲ್ಲ ಪ್ರಕ್ರಿಯೆ ಸ್ಥಗಿತ ಮಾಡಿದ್ದೀವಿ ಅಂದಿದ್ದಾರೆ. ಸಿದ್ದರಾಮಯ್ಯ ಈಗ ಟೋಪಿ ತೆಗೆದಿದ್ದಾರೆ, ಮುಂದೆ ಮತ್ತೆ ಮಸೀದಿಗೆ ಹೋಗಿ ಟೋಪಿ ಹಾಕಿದರೆ ನಂಬುವುದು ಹೇಗೆ? ಇದು ವಕ್್ಫ ಬೋರ್ಡ್ ಆಗಿ ಉಳಿದಿಲ್ಲ, ಸಾಬರ ಬೋರ್ಡ್ ಆಗಿದೆ. ಮೊಹಮದ್ ಘೋರಿ, ಆದಿಲ್ ಷಾಹಿ ಬೋರ್ಡ್ ಆಗಿದೆ ಎಂದು ಕಿಡಿಕಾರಿದರು.
ಎಲ್ಲೆಲ್ಲೂ ರೈತರ ಜಮೀನಿಗೆ ನೊಟೀಸ್ ಕೊಟ್ಟಿದ್ದಾರೆ. ರೈತರ ಭೂಮಿ, ಶಾಲೆ, ದೇವಸ್ಥಾನ, ಮಠಗಳನ್ನು ವಕ್್ಫ ಜಾಗ ಎಂದು ಮಾಡಿದ್ದಾರೆ. ಇದು ತುಘಲಕ್ ಸರ್ಕಾರ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಲೇವಡಿ ಮಾಡಿದರು. ಈ ಭಯೋತ್ಪಾದಕ, ಮತಾಂಧ ಮುಸ್ಲಿಮರು ರಾಜ್ಯದಲ್ಲಿ ಮಗುವಿನಂತೆ ಮಲಗಬಹುದು, ಯಾಕಂದ್ರೆ ಈ ಸರ್ಕಾರ ಅವರ ಪರ ಇದೆ. ಸ್ಲೀಪ್ ಲೈಕ್ ಎ ಬೇಬಿ ಬನ್ನಿ ಅಂತ ಪಾಕಿಸ್ತಾನದವರಿಗೆ ಸಿದ್ದರಾಮಯ್ಯ ಕರೀತಿದ್ದಾರೆ ಎಂದು ಕುಟಕಿದರು.
ದೇಶದ್ರೋಹಿ:
ಬಳ್ಳಾರಿಯಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ,
ನಿಜಾಮರ ಕಾಲದಲ್ಲಿ ರಜಾಕಿಗಳು ಜನರನ್ನು ಲೂಟಿ ಮಾಡುತ್ತಿದ್ದರು. ಅದೇ ರೀತಿ ರೈತರ 15 ಸಾವಿರ ಎಕರೆಯಷ್ಟು ಜಮೀನನ್ನು ಕಸಿಯುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.
ಸರ್ಕಾರದ ಈ ನಡೆ ವಿರುದ್ಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ’ ಇದು ಇಲ್ಲಿಗೆ ನಿಲ್ಲುವುದಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಕಾರಜೋಳ ಅವರ ಸತ್ಯಶೋಧನಾ ಸಮಿತಿ ವರದಿ ನಮ್ಮ ಕೈಸೇರಿದೆ. ನ್ಯಾಯವಾದಿಗಳ ತಂಡವನ್ನೂ ಪಕ್ಷ ರಚನೆ ಮಾಡಿದೆ. ಯಾವುದೇ ರೈತರಿಗೆ ಅನ್ಯಾಯವಾಗಿದ್ದಲ್ಲಿ ವಕೀಲರ ತಂಡವನ್ನು ಸಂಪರ್ಕಿಸಬಹುದು. ಒಂದು ಇಂಚು ಜಾಗ ವಕ್ಫ್‌ಗೆ ಹೋಗಲು ಬಿಜೆಪಿ ಬಿಡುವುದಿಲ್ಲ. ನಾವು ರೈತರ ಪರ ಇರಲಿದ್ದೇವೆ’ ಎಂದು ಹೇಳಿದರು
‘ಜಮೀರ್ ಎಂಬ ದೇಶದ್ರೋಹಿ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಬೆದರಿಸಿ ರೈತರ ಜಮೀನುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ವಿರಕ್ತ ಮಠದ ಜಮೀನು ವಕ್ಫ್‌ಗೆ ಹೋಗುವಂತಾಗಿದೆ. ಕೊಪ್ಪಳದಲ್ಲಿ ದಲಿತರ ಜಮೀನು ಕಬಳಿಸಲಾಗುತ್ತಿದೆ. ಕಲಬುರಗಿಯ ಸವಳೇಶ್ವರ ಗ್ರಾಮದ ಬೀರೇಶ್ವರ ದೇಗುಲದ ಜಮೀನನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಮತ್ತು ಜಮೀರ್ ಕಾರಣ’ ಎಂದು ಆಪಾದಿಸಿದರು
‘ವಕ್ಫ್ ತಿದ್ದುಪಡಿ ಕಾಯಿದೆ ಸಂಸದೀಯ ಸಮಿತಿಯ ಮುಂದೆ ಇದೆ. ಪ್ರಧಾನಿ ನರೇಂದ್ರ ಮೋದಿ ಏನಾದರೂ ಈ ಕಾನೂನು ಜಾರಿಗೆ ತಂದರೆ, ರೈತರಿಂದ ಜಮೀನು ಪಡೆಯುವುದು ಕಷ್ಟ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಇದಾದ ನಂತರ ಇಲ್ಲಿ ಯಾರೂ ರೌಡಿಗಳಿಲ್ಲ, ಪುಡಾರಿಗಳಿಲ್ಲ. ಎಲ್ಲರೂ ರೈತರೇ ಬನ್ನಿ’ ಎಂದು ಹೇಳಿ ತಾವಿದ್ದಲ್ಲಿಗೇ ಬಳ್ಳಾರಿ ಜಿಲ್ಲಾಧಿಕಾರಿಯನ್ನು ಕರೆಸಿಕೊಂಡ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮನವಿ ಪತ್ರವನ್ನು ಅವರ ಕೈಗೆ ನೀಡಿದರು.
ಸಂಘ, ಸಂಸ್ಥೆಗಳು ಪ್ರತಿಭಟನೆ ನಡೆಸಿದರೆ ಜಿಲ್ಲಾಧಿಕಾರಿಗಳ ಕಚೇರಿಗೇ ತೆರಳಿ ಮನವಿ ಪತ್ರ ಸಲ್ಲಿಸುವುದು ವಾಡಿಕೆ. ಆದರೆ, ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಬಂದಿದ್ದ ಕಾರಣಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಪ್ರತಿಭಟನಾ ಸ್ಥಳಕ್ಕೇ ತೆರಳಿದ್ದರು. ಕಚೇರಿ ಆವರಣದ ಕಟ್ಟೆಯ ಮೇಲೆ ನಿಂತಿದ್ದ ವಿಜಯೇಂದ್ರ ಅವರನ್ನು ಕೆಳಗಿಳಿದು ಬರುವಂತೆ ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾಧಿಕಾರಿ ಮಾತಿಗೆ ಆಕ್ರೋಶಗೊಂಡ ವಿಜಯೇಂದ್ರ, ‘ಇಲ್ಯಾರೂ ರೌಡಿಗಳಿಲ್ಲ, ಪುಡಾರಿಗಳಿಲ್ಲ ಬನ್ನಿ’ ಎಂದು ಹೇಳಿದರು. ಮರುಮಾತಾಡದೇ ಕಟ್ಟೆಯ ಬಳಿಗೇ ತೆರಳಿದ ಜಿಲ್ಲಾಧಿಕಾರಿ ಮನವಿ ಪತ್ರ ಸ್ವೀಕರಿಸಿದರು.