ಬೆಂಗಳೂರು.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ವಿಚಾರ ಸಾಕಷ್ಟು ವಿವಾದ ಸೃಷ್ಟಿಸಿದೆ. ಗ್ಯಾರಂಟಿ ಯೋಜನೆ ಅನ್ವಯ ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಿಸಲು ಸಾಧ್ಯವಾಗದೆ ಎಲ್ಲಾ ಅರ್ಹರ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.
ಆದರೆ ಕಾರ್ಡ್ ರದ್ದುಪಡಿಸುವ ವಿಚಾರ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ಅಲ್ಲ ಬದಲಿಗೆ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ ಅರ್ಹರಿಗೆ ಸೌಲಭ್ಯ ಕಲ್ಪಿಸಬೇಕು ಎನ್ನುವ ದೃಷ್ಟಿಯಿಂದ ಕಾರ್ಡ್ ವ್ಯವಸ್ಥೆಯನ್ನು ಪರಿಷ್ಕರಣೆ ಮಾಡುವಂತೆ ತಿಳಿಸಿದೆ. ಈ ಕುರಿತಂತೆ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಆಹಾರ ಇಲಾಖೆ ಪತ್ರ ರವಾನಿಸಿದೆ.
ಕರ್ನಾಟಕಕ್ಕೆ ಬರೆದಿರುವ ಪತ್ರದಲ್ಲಿ ರಾಜ್ಯದ ತಲಾ ಆದಾಯ ಹೆಚ್ಚಾಗಿದ್ದರೂ ಬಿಪಿಎಲ್ ಕುಟುಂಬಗಳ ಸಂಖ್ಯೆಯು ಜಾಸ್ತಿಯಾಗಿದ್ದು, ಇದು ವ್ಯತಿರಿಕ್ತವಾಗಿ ಕಂಡುಬರುತ್ತಿದೆ. ಹೀಗಾಗಿ ಅನರ್ಹ ಕುಟುಂಬಗಳನ್ನು ಬಿಪಿಎಲ್ ವ್ಯಾಪ್ತಿಯಿಂದ ತೆಗೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿದ್ದು, ಈ ಪೈಕಿ 10,68,042 ಅಂತ್ಯೋದಯ ಕಾರ್ಡ್‌ಗಳು, 1,14,60,137 ಬಿಪಿಎಲ್ ಕಾರ್ಡ್‌ಗಳು, ಉಳಿದಂತೆ, 25,62,355 ಎಪಿಲ್ ಕಾರ್ಡ್‌ಗಳು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಒಟ್ಟು ಬಿಪಿಎಲ್ ಕಾರ್ಡ್‌ಗಳ ಪೈಕಿ 13,87,652 ಕಾರ್ಡ್‌ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ.
ಅವುಗಳಲ್ಲಿ 98,473 ಆದಾಯ ತೆರಿಗೆ ಪಾವತಿದಾರರು ಹೊಂದಿರುವ ಕಾರ್ಡ್‌ಗಳಾಗಿವೆ. 4,036 ಸರ್ಕಾರಿ ನೌಕರರು ಹೊಂದಿರುವ ಕಾರ್ಡ್‌ಗಳಾಗಿವೆ. ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚಿರುವವರು ಹೊಂದಿರುವ ಕಾರ್ಡ್‌ಗಳ ಸಂಖ್ಯೆ 10,09,476. ಕಳೆದ ಆರು ತಿಂಗಳುಗಳಿಂದ ಪಡಿತರವನ್ನೇ ಪಡೆಯದ ಕಾರಣಕ್ಕೆ ಅಮಾನತುಗೊಂಡ ಕಾರ್ಡ್‌ಗಳ ಸಂಖ್ಯೆ 2,75,667.
ಅಲ್ಲದೆ, ಮೃತಪಟ್ಟ 1,59,319 ಸದಸ್ಯರ ಹೆಸರುಗಳನ್ನು ಕಾರ್ಡ್‌ನಿಂದ ತೆಗೆದುಹಾಕಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ ಅದರಂತೆ
ಅಮಾನತು, ರದ್ದು ಮತ್ತು ಎಪಿಲ್ ಕಾರ್ಡ್‌ಗಳಾಗಿ ಬದಲಾಯಿಸಿದ ಒಟ್ಟು ಕಾರ್ಡ್‌ಗಳ ಸಂಖ್ಯೆ 3,81,983. ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.