ಹೆಣ್ಣುಮಕ್ಕಳು ಸರ್ಕಾರಿ ಕಚೇರಿಯಲ್ಲಿದ್ದರೆ ಭ್ರಷ್ಟಾಚಾರ ನಡೆಯಲ್ಲ. ಕಡತಗಳೆಲ್ಲ ಸಲೀಸಾಗಿ ವಿಲೇವಾರಿಯಾಗುತ್ತವೆ. ಬಹಳ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದ್ದ ಕಾಲವೊಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ನಂಬಿಕೆ ಹುಸಿಯಾಗುವ ರೀತಿಯಲ್ಲಿ ಭ್ರಷ್ಟಾಚಾರದಲ್ಲಿ ಮಹಿಳೆಯರು ಸುದ್ದಿಯಾಗುತ್ತಿದ್ದಾರೆ. ಕಾರಣವೇನು? ಒತ್ತಡವೇ, ದುರಾಸೆಯೇ?
ಭ್ರಷ್ಟಾಚಾರದಲ್ಲೂ ಸಮಾನತೆಯೇ?
‘ಭ್ರಷ್ಟಾಚಾರದಲ್ಲಿ ಗಂಡು- ಹೆಣ್ಣು ಸರಿ ಸಮನಾಗಿ ಸಾಧನೆ ಮಾಡುತ್ತಿದ್ದಾರೆ. ಈ ಹೆಣ್ಣುಮಕ್ಕಳೇನೂ ಸಾಚಾ ಅಲ್ಲ. ಅವರಿಗೆ ದುರಾಸೆ ಹೆಚ್ಚು’ ಎಂಬ ಕುಹಕದ ಮಾತುಗಳು ಈಗೀಗ ಹೆಚ್ಚಾಗಿ ಕೇಳಿ ಬರುತ್ತಿವೆ. ಅದು ಸಹಜವೇ. ಅದಕ್ಕೆ ಕಾರಣವೂ ಇದೆ. ಕೆಲ ದಶಕಗಳ ಹಿಂದೆ ಮಹಿಳೆಯರು ಉನ್ನತ, ಜವಾಬ್ದಾರಿಯುತ ಹುದ್ದೆ, ರಾಜಕೀಯದ ಪ್ರಮುಖ ಸ್ಥಾನಗಳಲ್ಲಿ ಇದ್ದಾರೆಂದರೆ ಅಲ್ಲಿ ಅಕ್ರಮದ ವಾಸನೆ ಇರುವುದಿಲ್ಲ ಎಂಬ ನಂಬಿಕೆ ಇತ್ತು. ಅಕ್ರಮ ಕೆಲಸ ಮಾಡಿಸಲು ಹೋಗುವವರೂ ಅಂಜುತ್ತಿದ್ದರು. ‘ಆ ಮೇಡಂ ತುಂಬಾ ಸ್ಟ್ರಿಕ್ಟು, ಆಯಮ್ಮ ಹಣ- ಗಿಣ ಮುಟ್ಟಲ್ಲ. ದಾಖಲೆ ಒಂಚೂರು ಸರಿಯಿಲ್ಲ ಅಂದ್ರೆ ಸಾಕು ಫೈಲೇ ಮುಟ್ಟಲ್ಲ’ ಎಂಬ ಮಾತುಗಳು ಸರ್ವೇ ಸಾಮಾನ್ಯವಾಗಿತ್ತು. ರಾಜಕಾರಣಿಗಳೂ ಇಷ್ಟು ಭ್ರಷ್ಟರಾಗಿರಲಿಲ್ಲ. ಒಳ್ಳೆಯ ಅಧಿಕಾರಿಗಳ ಜೊತೆ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಲಂಚ ಪಡೆಯುವುದು, ಅಕ್ರಮ ಕೆಲಸ ಮಾಡಿಕೊಡುವುದಕ್ಕೆ ಹೆದರುತ್ತಿದ್ದರು. ಅದು ಮುಜುಗರದ ಪ್ರಶ್ನೆಯಾಗಿತ್ತು. ಆಗ ದೊಡ್ಡ ಹುದ್ದೆಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇತ್ತು. ಈಗ ಶೈಕ್ಷಣಿಕವಾಗಿ ಹೆಣ್ಣುಮಕ್ಕಳು ಬಹಳ ಮುಂದೆ ಇದ್ದಾರೆ. ಹಾಗಾಗಿ ಪ್ರಮುಖ ಹುದ್ದೆಗಳಲ್ಲಿ, ಉನ್ನತ ಸ್ಥಾನಗಳಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಭ್ರಷ್ಟಾಚಾರದಲ್ಲಿ ಸಿಕ್ಕಿ ಹಾಕಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ.
ಹೆಣ್ಣಿಗೆ ಸಹಜವಾಗಿಯೇ ಚಿನ್ನಾಭರಣ, ಸೀರೆಗಳ ಮೇಲೆ ಮೋಹ ಹೆಚ್ಚು. ಈಗ ಹೊಸಬಟ್ಟೆ ಕೊಳ್ಳಲು ಕಾರಣ ಬೇಕಾದಷ್ಟಿವೆ. ವ್ಯಾಪಾರೀಕರಣಗೊಂಡ ಹುಸಿ ಆಚರಣೆಗಳು, ಹಬ್ಬ, ಹುಟ್ಟಿದ ದಿನ, ವಿವಾಹ ವಾರ್ಷಿಕೋತ್ಸವ, ಮಕ್ಕಳ ಹುಟ್ಟುಹಬ್ಬ ಗಂಡನ ಪ್ರೊಮೋಷನ್ ಪಾರ್ಟಿ, ಸಂಬಂಧಿಗಳ ಮದುವೆ ಹೀಗೆ ನೂರಾರು ಸಮಾರಂಭಗಳು. ಪ್ರತಿ ಸಮಾರಂಭಕ್ಕೂ ಹೊಸ ಉಡುಗೆ, ಭಿನ್ನ ಆಭರಣ ತೊಡಬೇಕು. ಸಭೆಯಲ್ಲಿ ಎಲ್ಲರ ಗಮನ ಸೆಳೆಯಬೇಕು ಎಂಬುದು ಕೆಲವು ಹೆಣ್ಣುಮಕ್ಕಳ ಮನಸ್ಥಿತಿ. ಎಷ್ಟು ಕೊಂಡರೂ ಸಾಲದು. ಇನ್ನೂ ಬೇಕೆಂಬ ಆಸೆ.
ಇದಕ್ಕೆ ಪೂರಕವೆಂಬಂತೆ ಅಧಿಕಾರಿಗಳು ಪುರುಷರೇ ಇರಲಿ, ಮಹಿಳೆಯರೇ ಇರಲಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಂದ ದಾಳಿಯಾದಾಗ ಅವರ ಮನೆಗಳಲ್ಲಿ ಕೇಜಿಗಟ್ಟಲೆ ಚಿನ್ನ, ಬೆಳ್ಳಿ ವಜ್ರಾಭರಣ ಸಿಗುತ್ತದೆ. ಲಂಚ ಪಡೆದ ಕೋಟ್ಯಂತರ ಹಣವನ್ನು ಚಿನ್ನಾಭರಣಗಳಿಗೆ ಸುರಿದಿರುತ್ತಾರೆ. ಪುರುಷರ ಧನದಾಹಕ್ಕೆ ಮನೆಯಲ್ಲಿರುವ ಹೆಂಗಸರೇ ಕಾರಣ ಎನ್ನುವ ಆರೋಪಗಳೂ ಇವೆ. ಒಟ್ಟಿನಲ್ಲಿ ಕೊಳ್ಳುಬಾಕ ಸಂಸ್ಕೃತಿಗೆ ಹೆಣ್ಣು ಮಾರು ಹೋಗಿರುವುದಂತು ನಿಜ. ಹಣ ಮಾಡುವ ಸುಲಭ ಮೂಲಗಳು ಕಣ್ಣ ಮುಂದಿರುವಾಗ ಹೆಣ್ಣೋ ಗಂಡೋ ದುರಾಸೆಯಿರುವ ಮನುಷ್ಯರು ಸಹಜವಾಗಿಯೇ ಹಣದ ಮೋಹಕ್ಕೆ ಬಲಿಯಾಗುತ್ತಿದ್ದಾರೆ.
‘ಅವಕಾಶ, ವಾತಾವರಣ, ಒತ್ತಡ ಕಾರಣ’: ಅಧಿಕಾರಿಗಳು ಭ್ರಷ್ಟರಾಗಲು ಅವಕಾಶ, ವಾತಾವರಣ, ಮೇಲಿನವರ ಒತ್ತಡವೂ ಕಾರಣ ಅಂತಾರೆ ನಿವೃತ್ತ ಐಎಎಸ್ ಅಧಿಕಾರಿ ಹರೀಶ್ ಗೌಡ. ಈಗ ಸಮಾಜವೇ ಕುಸಿದು ಹೋಗಿದೆ. ಹಾಗಿರುವಾಗ ಮಹಿಳಾ ಅಧಿಕಾರಿಗಳು ಭ್ರಷ್ಟರಾಗುತ್ತಿದ್ದಾರೆ ಎಂದು ದೂರುವಂತಿಲ್ಲ. ಯಾವುದೇ ಇಲಾಖೆಗಳಲ್ಲಿ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಟಾಪ್ ಮೋಸ್ಟ್ ಹುದ್ದೆಯಲ್ಲಿರಲಿ ಎಲ್ಲರಿಗೂ ಲಂಚ ಸ್ವೀಕರಿಸುವುದು ಕನಿಷ್ಠ ಅರ್ಹತೆ. ಇದು ನಾನು ಅಧಿಕಾರಿಯಾಗಿದ್ದಾಗಲೂ ಇತ್ತು. ಆದರೆ ಈಗ ಅದು ಬೃಹದಾಕಾರವಾಗಿ ಬೆಳೆದಿದೆ. ಒಬ್ಬ ವಿಲೇಜ್ ಅಕೌಂಟೆಂಟ್ ಹಣ ಮುಟ್ಟುವುದಿಲ್ಲ ಎಂದಿಟ್ಟುಕೊಳ್ಳೋಣ, ಆದರೆ ತಹಶೀಲ್ದಾರ್, ಅಸಿಸ್ಟೆಂಟ್ ಕಮಿಷನರ್ ಯಾವುದೋ ಒಂದು ಅಕ್ರಮ ಮಾಡಿಕೊಡಲು ಹೇಳುತ್ತಾರೆ. ಆದರೆ ಮುಂದೆ ಲೋಕಾಯುಕ್ತವೋ ಅಥವಾ ಇನ್ಯಾವುದೋ ಸಂಸ್ಥೆಗಳಿಂದ ದಾಳಿಯಾದಾಗ ಸಿಕ್ಕಿ ಹಾಕಿಕೊಳ್ಳುವವರು ಕೆಳಗಿನ ಸಿಬ್ಬಂದಿ. ಮಂತ್ರಿಗಳೇ ಹೀಗೆ ಮಾಡಿ ಅಂತಾರೆ, ಅಧಿಕಾರಿ ಮಾಡಲ್ಲ ಎನ್ನುವಂತಿಲ್ಲ. ಒಪ್ಪದಿದ್ದರೆ ಆ ರಾತ್ರಿಯೇ ಬೇರೆ ಯಾವುದೋ ಇಲಾಖೆಗೆ ವರ್ಗ ಮಾಡುತ್ತಾರೆ ಅಷ್ಟೇ.
ಮಹಿಳಾ ಅಧಿಕಾರಿಗಳು ಭ್ರಷ್ಟರಾಗಲು ಕುಟುಂಬವೂ ಕಾರಣ. ಪತಿಯೂ ಸರ್ಕಾರಿ ಉದ್ಯೋಗಿಯಾಗಿ ಆತ ಹೆಚ್ಚು ಲಂಚದ ಹಣ ತರುವವನಾಗಿದ್ದರೆ ಪತ್ನಿಯಿಂದಲೂ ಆತ ಅದನ್ನೇ ಬಯಸುತ್ತಾನೆ. ‘ಇಷ್ಟು ದೊಡ್ಡ ಹುದ್ದೆಯಲ್ಲಿದ್ದಿ, ನೀನ್ಯಾಕೆ ಹಣ ಮಾಡಲ್ಲ’ ಎಂದು ಪ್ರಶ್ನಿಸುವವರೂ ಇದ್ದಾರೆ. ಹಣದ ದಾಹ ಪ್ರತಿಯೊಬ್ಬರಲ್ಲೂ ಹೆಚ್ಚಿದೆ. ಮಕ್ಕಳ ಬೇಡಿಕೆಗಳು, ಗಂಡನ ಬೇಡಿಕೆಗಳು ಆಕೆಯನ್ನು ಲಂಚ ಪಡೆಯಲು ಪ್ರೇರೇಪಿಸುತ್ತಿದೆ. ‘ನಾನಿಷ್ಟು ತರುತ್ತೇನೆ, ನೀನ್ಯಾಕೆ ತರಲ್ಲ’ ಎಂಬ ಹೀಗಳಿಕೆಗೆ ಒಳಗಾಗಿ ಕಡೆಗೆ ಅಕ್ರಮ ಹಣ ಸಂಪಾದಿಸಲು ಪ್ರೇರಣೆಯಾಗುತ್ತದೆ. ಹಾಗಾಗಿ ಒಟ್ಟು ಸಮಾಜ ಮತ್ತು ಕುಟುಂಬವೂ ಕಾರಣ. ಇಡೀ ವ್ಯವಸ್ಥೆ ಧಂದೆಯಲ್ಲಿ ತೊಡಗಿದಾಗ, ಇದು ಇರೋದೇ ಹೀಗೆ, ಹಣ ಪಡೆದರೆ ತಪ್ಪಲ್ಲ ಎಂಬ ಭಾವನೆ ಬರುತ್ತದೆ. ಕೆಲವೊಮ್ಮೆ ಇದೇ ಚಟವಾಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಭ್ರಷ್ಟರಾಗಿಯೂ ಸಿಕ್ಕಿಹಾಕಿಕೊಳ್ಳದ ನೂರಾರು ಅಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಇದ್ದಾರೆ. ಅವರು ತಮಗೆ ಬೇಕಾದಷ್ಟು ಆಸ್ತಿಪಾಸ್ತಿ ಮಾಡಿಕೊಂಡು, ಯಾರಿಗೆ ಕೊಡಬೇಕೋ ಅವರಿಗೆ ನಿಯತ್ತಿನಿಂದ ಕಪ್ಪ ಕೊಡುತ್ತಾ ನೆಮ್ಮದಿಯಿಂದ ಇದ್ದಾರೆ ಎನ್ನುತ್ತಾರೆ ಅವರು.
ಜಾತಿ, ಧರ್ಮ, ಲಿಂಗ ಅಡ್ಡಿ ಬರಲ್ಲ
ಭ್ರಷ್ಟಾಚಾರಕ್ಕೆ ಧರ್ಮ, ಜಾತಿ, ಲಿಂಗ ಭೇದ ಇಲ್ಲ. ಅದೊಂದು ಮನಸ್ಥಿತಿ. ಈಗಲೂ ಕಚೇರಿಗಳಲ್ಲಿ ಹೆಚ್ಚು ನಿಷ್ಟೆಯಿಂದ ಕೆಲಸ ಮಾಡುವವರು ಮಹಿಳೆಯರೇ. ನೈತಿಕವಾಗಿ ಭ್ರಷ್ಟರಾಗದ ಮಹಿಳಾ ಅಧಿಕಾರಿಗಳೂ ಇದ್ದಾರೆ. ಕೌಟುಂಬಿಕ ಬಂಧನದಿಂದ ಹೊರ ಬಂದಾಗ ಕೆಲಸಕ್ಕೆ ಸೇರಲು ಲಂಚ ಕೊಡದೇ ಅರ್ಹತೆಯಿಂದ ಬಂದವರು ಇದ್ದಾರೆ. ಇಡೀ ವ್ಯವಸ್ಥೆ ಭ್ರಷ್ಟವಾಗಿದ್ದರೂ ನಾನು ಅದರಿಂದ ದೂರ ಇರಬೇಕು ಎಂಬ ಬದ್ಧತೆ ಇರುವವರೂ ಇದ್ದಾರೆ ಎನ್ನುವ ಬಿಡಿಎಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತರಾಗಿರುವ ಕೆ. ಪುಟ್ಟಸ್ವಾಮಿ, ಮಹಿಳಾ ಅಧಿಕಾರಿಗಳಲ್ಲಿ ಎರಡೂ ಬಗೆಯ ಮನಸ್ಥಿತಿಯವರು ಇದ್ದಾರೆ ಎಂಬುದಕ್ಕೆ ಕೆಲವು ನಿದರ್ಶನಗಳನ್ನು ನೀಡಿದ್ದಾರೆ.
ಬಿಡಿಎಯಲ್ಲಿ ಕೆಲ ವರ್ಷಗಳ ಹಿಂದೆ ಹಿಂದುಳಿದ ವರ್ಗಕ್ಕೆ ಸೇರಿದ ಉಪನ್ಯಾಸಕಿಯೊಬ್ಬರು ಅಧಿಕಾರಿಯಾಗಿ ಬಂದಿದ್ದರು. ಮೀಸಲಾತಿಯಲ್ಲಿ ಬಂದವರು, ಮೇಲಾಗಿ ಉಪನ್ಯಾಸಕಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದವರು. ಆದರೆ, ಆಕೆಯ ಪರವಾಗಿ ಗಂಡ ಹಣ ಪಡೆಯುತ್ತಿದ್ದರು. ಹಣ ಪಡೆದು ಪತ್ನಿಗೆ ಫೋನ್ ನಲ್ಲಿ ತಿಳಿಸಿದ ನಂತರ ಆಕೆ ಕಡತಕ್ಕೆ ಸಹಿ ಹಾಕುತ್ತಿದ್ದರು. ಆದರೆ, ಒಮ್ಮೆ ಪತಿ ನಗರದಲ್ಲಿ ಇಲ್ಲದಿರುವಾಗ ವ್ಯಕ್ತಿಯೊಬ್ಬರು 7ಲಕ್ಷ ಲಂಚವನ್ನು ಕಚೇರಿಗೆ ತಂದು ಕೊಟ್ಟಿದ್ದರು. ಅದನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಬೇಕಾಯಿತು.
ಇನ್ನೊಬ್ಬರು ಪರಿಶಿಷ್ಟ ಜಾತಿಗೆ ಸೇರಿದ ಎಸಿ ಹಂತದ ಅಧಿಕಾರಿ ಇದ್ದರು. ಬಿಡಿಎ ಭೂಪರಿವರ್ತನಾ ಅಧಿಕಾರಿ ರಜೆ ಹೋಗಿದ್ದಾಗ ಸ್ವಲ್ಪ ದಿನ ಇನ್ ಚಾರ್ಜ್ ಆಗಿದ್ದರು. ಆದರೆ, ಅವರು ಯಾವ ಕಡತವನ್ನೂ ಮುಟ್ಟಲೇ ಇಲ್ಲ. ಯಾಕೆಂದ್ರೆ, ಅಷ್ಟು ಅದ್ವಾನ ಮಾಡಿಟ್ಟಿದ್ದರು. ವ್ಯವಸ್ಥೆ ಕೆಟ್ಟಿರುವಾಗ ನಾನು ಕೈ ಹಾಕಬಾರದು ಎಂಬ ಎಚ್ಚರ ಅವರಿಗಿತ್ತು. ಅದಕ್ಕಾಗಿ ಅವರು ಹೆಚ್ಚು ಸಾರ್ವಜನಿಕರು ಬರದೇ ಇರುವ ಕಚೇರಿಗಳ ಹುದ್ದೆಗಳಿಗೆ ಹೇಳಿ ಹಾಕಿಸಿಕೊಳ್ಳುತ್ತಿದ್ದರು.
ಬಿಡಿಎಗೆ ಬಂದ ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಅಧಿಕಾರಿಯೊಬ್ಬರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು. ಅಕ್ರಮಕ್ಕೆ ಅವಕಾಶ ಇರಲಿಲ್ಲ. ಆದರೆ ಅವರನ್ನು ಒಂದೇ ವರ್ಷಕ್ಕೆ ಬೇರೆ ಇಲಾಖೆಗೆ ವರ್ಗಾವಣೆ ಮಾಡಿದ್ದರು. ‘ನನಗೆ ಬರುವ ಸಂಬಳವನ್ನೇ ಖರ್ಚು ಮಾಡಲಾಗುತ್ತಿಲ್ಲ. ಗಂಡನಿಗೂ ಉದ್ಯೋಗ ಇದೆ. ಲಂಚ ಹಣ ಪಡೆದು ಏನು ಮಾಡಲಿ’ ಎಂದು ಆಕೆ ಹೇಳುತ್ತಿದ್ದರು ಎಂದು ಸ್ಮರಿಸುತ್ತಾರೆ.
ಕೋಟ್ಸ್
ಭ್ರಷ್ಟರಿಗೆ ಮಂತ್ರಿಗಳ ಬೆಂಬಲ
ಯಾವುದೋ ಒಂದು ಮುಖ್ಯ ಇಲಾಖೆಯಲ್ಲಿ ಬದಲಾವಣೆ ತರಬೇಕು ಎಂದು ಬಯಸಿ ಬರುವ ಅಧಿಕಾರಿಗೆ, ಆತ ಭ್ರಷ್ಟ ಆಗದಿದ್ದರೆ ಅಲ್ಲಿರಲು ಸಾಧ್ಯವಿಲ್ಲ. ಭ್ರಷ್ಟರಾಗಲು ಇಚ್ಛಿಸದ ಅನೇಕ ಅಧಿಕಾರಿಗಳು ವರ್ಷಗಳ ಕಾಲ ಯಾವುದೋ ಪ್ರಮುಖವಲ್ಲದ ಸಂಸ್ಥೆಗಳಲ್ಲಿ ನಾಮಕಾವಸ್ತೆ ಹುದ್ದೆಗಳಲ್ಲಿ ಇರುತ್ತಾರೆ. ಹಣ ಮಾಡಲು ಇಚ್ಛಿಸುವವರು, ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುವವರು, ಮಂತ್ರಿಗಳಿಗೆ ತಿಂಗಳಿಗಿಷ್ಟು ಅಂತ ಹಫ್ತಾ ಕೊಡುವವರು ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಇರುತ್ತಾರೆ
-ಹರೀಶ್ ಗೌಡ, ನಿವೃತ್ತ ಐಎಎಸ್ ಅಧಿಕಾರಿ
ಅಪರಿಮಿತ ಆಸೆಗಳು ಕಾರಣ
ಈಗ ಬಂಡವಾಳಶಾಹಿ ಸಮಾಜ ನಿರ್ಮಾಣವಾಗಿದೆ. ಅಪರಿಮಿತ ಆಸೆಗಳು, ಭೋಗದ ವಸ್ತುಗಳು ಸೃಷ್ಟಿಯಾಗಿವೆ. ಹಿಂದೆ ಮನೆಗೊಂದು ರೇಡಿಯೊ ಇತ್ತು. ಅದು 20 ವರ್ಷದವರೆಗೂ ಇರುತ್ತಿತ್ತು. ಈಗ ಒಂದು ಮನೆಗೆ ಒಂದು ಟಿವಿ ಸಾಕಾಗಲ್ಲ. ವರ್ಷ ವರ್ಷವೂ ಮಾಡೆಲ್ ಬದಲಾದಂತೆ ಟಿವಿ ಬದಲಾಗುತ್ತದೆ. ಮೊಬೈಲು, ಕಾರು ಇದಕ್ಕೆಲ್ಲ ಹಣ ಬೇಕು. ಬಾಹ್ಯ ಒತ್ತಡಗಳು ಹೆಚ್ಚಿವೆ ಇದು ಅಧಿಕಾರಿಗಳನ್ನು ಭ್ರಷ್ಟಾಚಾರಕ್ಕೆ ನೂಕುತ್ತಿದೆ. ಹಿಂದೆ ಹೆಣ್ಣುಮಕ್ಕಳು ಲಂಚ ಪಡೆಯಲು ಮುಜುಗರ ಪಡುತ್ತಿದ್ದರು.ಈಗ ಹಾಗಿಲ್ಲ.
-ಕೆ. ಪುಟ್ಟಸ್ವಾಮಿ, ನಿವೃತ್ತ ಅಧಿಕಾರಿ
ಭ್ರಷ್ಟ ಮಾದರಿಗಳ ಅನುಸರಣೆ
ಸಮಾಜದಲ್ಲಿ ಮಹಿಳೆಯರ ಬಗ್ಗೆ ಒಂದು ಉತ್ತಮ ಭಾವನೆ ಇರುತ್ತದೆ. ಅವರು ಭ್ರಷ್ಟರಾಗಲ್ಲ, ಚೆನ್ನಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇರುತ್ತದೆ. ಸಹಜವಾಗಿಯೇ ಮಹಿಳೆಗೆ ನೀತಿ ನಿಯಮಗಳ ಬಗ್ಗೆ ಗೌರವ ಇರುತ್ತದೆ. ಉತ್ತಮವಾಗಿ ಕೆಲಸ ಮಾಡಬೇಕು ಎಂಬ ಉತ್ಸಾಹ ಇರುತ್ತದೆ. ಹಾಗಾಗಿ ಮಹಿಳಾ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಸಿಕ್ಕಿಕೊಂಡಾಗ ಸಮಾಜ ಹೆಬ್ಬೇರಿಸುವುದು ಸಹಜ. ಆದರೆ, ಬಹಳಷ್ಟು ಮಂದಿ ಪ್ರಾಮಾಣಿಕರಿದ್ದಾರೆ. ಹೆಣ್ಣುಮಕ್ಕಳು ಮೊದಲೆಲ್ಲ ಉತ್ತಮ ಅಧಿಕಾರಿಗಳನ್ನು ಮಾದರಿಯಾಗಿ ನೋಡುತ್ತಿದ್ದರು. ಈಗ ಅವರೂ ಭ್ರಷ್ಟರನ್ನು ನೋಡಿ ತಾವೂ ಭ್ರಷ್ಟಾಚಾರಕ್ಕೆ ಇಳಿದಂತಿದೆ. ಒಮ್ಮೆ ಆ ದಂಧೆಯೊಳಗೆ ಬಿದ್ದರೆ ಮೇಲೇಳುವುದು ಕಷ್ಟ.
-ಮದನಗೋಪಾಲ್, ನಿವೃತ್ತ ಐಎಎಸ್ ಅಧಿಕಾರಿ
ಗಂಡಂದಿರ ಪ್ರೇರಣೆ
ಭ್ರಷ್ಟಾಚಾರ ಕೂಡಾ ಒಂದು ಮನಸ್ಥಿತಿ. ಒಬ್ಬಿಬ್ಬರು ಭ್ರಷ್ಟಾಚಾರದಲ್ಲಿ ಸಿಕ್ಕಿ ಹಾಕಿಕೊಂಡಾಗ ಎಲ್ಲರೂ ಹಾಗೇ ಎಂಬ ತೀರ್ಮಾನಕ್ಕೆ ಬರಲಾಗದು. ಕೆಲವೊಮ್ಮೆ ಗಂಡಂದಿರ ಪ್ರೇರಣೆಯಿಂದ ಕೆಲವು ಮಹಿಳೆಯರು ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಸಾರ್ವಜನಿಕ ಸೇವೆಯಲ್ಲಿ ಕುಟುಂಬದವರ ಹಸ್ತಕ್ಷೇಪಕ್ಕೆ ಅವಕಾಶ ಕೊಡಬಾರದು. ಅಧಿಕಾರಿಗಳಲ್ಲಿ ಶಿಸ್ತು ಬಹಳ ಮುಖ್ಯ.
-ರತ್ನಪ್ರಭಾ, ನಿವೃತ್ತ ಐಎಎಸ್ ಅಧಿಕಾರಿ