ಬೆಂಗಳೂರು,ಡಿ.7:
ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವ ಬಣ ಬಡಿದಾಟಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರವಾಲ್ ಯಾವುದೇ ನಾಯಕರು ಪಕ್ಷದ ಚೌಕಟ್ಟು ಮೀರಿ ವರ್ತಿಸದಂತೆ ತಾಕೀತು ಮಾಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಹೋರಾಟ, ಸಂಘಟನೆ ಎಲ್ಲವೂ ಪಕ್ಷದ ಚೌಕಟ್ಟಿನಲ್ಲಿ ನಡೆಯಬೇಕು ಪ್ರತ್ಯೇಕ ಸಭೆಗಳ ಮೂಲಕ ಗೊಂದಲ ಮೂಡಿಸುವ ಕೆಲಸ ಮಾಡದೆ ಶಿಸ್ತು ಕಾಪಾಡಲು ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವ ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ನಡೆಸಿದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು ನಾವು ವಿಜಯೇಂದ್ರ ಬಣ ಅಥವಾ ಯತ್ನಾಳ್ ಬಣ ಎಂದು ಭಾವಿಸಬೇಡಿ ಬಿಜೆಪಿಯಲ್ಲಿ ಇರುವುದು ಒಂದೇ ಬಣ. ಪಕ್ಷ ಒಂದು ಬಾರಿ ನಿರ್ಧಾರ ಮಾಡಿದ ಮೇಲೆ ಯಾರೊಬ್ಬರು ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ
ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕಾರ್ಯಕರ್ತರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಎಲ್ಲೇ ಹೋದರೂ ಇಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸರ್ಕಾರದ ವಿರುದ್ದ ಸದನದ ಒಳಗೂ ಮತ್ತು ಹೊರಗೂ ಹೋರಾಟ ನಡೆಸಲು ಸಾಕಷ್ಟು ಅಸ್ತ್ರಗಳಿವೆ. ಆದೆ ನಮೊಳಗಿನ ಕಚ್ಚಾಟದಿಂದ ಆಡಳಿತ ಪಕ್ಷಕ್ಕೆ ನಾವೇ ಅಸ್ತ್ರಗಳ ಮೇಲೆ ಅಸ್ತ್ರ ನೀಡುತ್ತಿದ್ದೇವೆ. ಇದು ಪಕ್ಷದ ಸಂಘಟನೆಗೆ ಹಿನ್ನಡೆ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಮಾಜಿ ಮಂತ್ರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರೇಣುಕಾಚಾರ್ಯ ನೇತೃತ್ವದ ತಂಡ ಅವರನ್ನು ಭೇಟಿ ಮಾಡಿ ಪಕ್ಷದ ಇತ್ತೀಚಿನ ವಿದ್ಯಮಾನಗಳು ಬಗ್ಗೆ ವರಿಷ್ಠರ ಜೊತೆ ಚರ್ಚಿಸಲು ನಿಯೋಗದೊಂದಿಗೆ ಬರಲು ಅವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಪಕ್ಷದ ಅಧ್ಯಕ್ಷರ ಜೊತೆ ಮಾತನಾಡಿ ಸಮಯ ನಿಗದಿ ಪಡಿಸಿ ಕೊಡುವುದಾಗಿ ತಿಳಿಸಿದರು.
ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮಂತ್ರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮುಂದಿನ ದಿನಗಳಲ್ಲಿ ವಾಲ್ಮೀಕಿ ಹಗರಣ, ಬಾಣಂತಿಯರ ಸಾವು ಪ್ರಕರಣದಲ್ಲಿ ಹೋರಾಟ ಮಾಡ್ತೇವೆ. ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಮಾಡ್ತೇವೆ. ವಿಜಯೇಂದ್ರ ಅವರೇ ಮುಂದಿನ Electionವರೆಗೆ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬೇಕು. ಅವರ ನೇತೃತ್ವದಲ್ಲೇ ಚುನಾವಣೆ ನಡೆಯಬೇಕು ಅಂತ ಹೇಳಿದ್ದೇವೆ. ದೆಹಲಿಗೂ ಬರ್ತೇವೆ ಅಂತ ರಾಧಾ ಮೋಹನದಾಸ್ ಅವರೆದುರು ಹೇಳಿದ್ದೇವೆ ಎಂದು ತಿಳಿಸಿದರು.
ರೇಣುಕಾಚಾರ್ಯ ಮಾತನಾಡಿ ಪಕ್ಷದ ಗೊಂದಲಗಳ ಬಗ್ಗೆಯೂ ನಾವು ಚರ್ಚೆ ಮಾಡಿದ್ದೇವೆ. ಯಾರು ಏನು ಬೇಕಾದರೂ ಹೇಳಲಿ, ರಾಜ್ಯದಲ್ಲಿ ಪಕ್ಷ ಕಟ್ಟಿದವರು ಯಡಿಯೂರಪ್ಪ, ಅನಂತ್ ಕುಮಾರ್, ಹಿರಿಯರ ಬೆಂಬಲವೂ ಇತ್ತು. ಹಾಗೆಯೇ ವಿಜಯೇಂದ್ರ ಸಹ ಪಕ್ಷ ಕಟ್ತಾರೆ, ಮತ್ತೆ ಪಕ್ಷದ ಅಧಿಕಾರಕ್ಕೆ ತರ್ತಾರೆ. ಆದರೆ ಐದಾರು ಜನ ಪಕ್ಷದಲ್ಲಿ ಗೊಂದಲ ಮೂಡಿಸ್ತಿದ್ದಾರೆ, ಈ ಐವರ ಬಗ್ಗೆಯೂ ಮಾತಾಡಿದ್ದೇವೆ. ನಾನು ಅವರ ಹೆಸರು ಹೇಳಲು ಇಷ್ಟಪಡಲ್ಲ ಎಂದು ಹೇಳಿದರು.
Previous Articleಅದಾನಿ ವಿರುದ್ಧ ರಾಜ್ಯದಲ್ಲಿ ಯಾಕಿಲ್ಲ ಕ್ರಮ
Next Article ಯತ್ನಾಳ್ ವಿರುದ್ಧ ಕ್ರಮಕ್ಕೆ ಮೀನಾಮೇಷ.