ಬೆಳಗಾವಿ,ಡಿ.9 :
ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಅದರಲ್ಲೂ ತಮ್ಮ ತವರು ಜಿಲ್ಲೆ ಬೆಳಗಾವಿಯ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಇವರನ್ನು ಕೆಂಡಮಂಡಲರಾಗುವಂತೆ ಮಾಡಿದೆ
ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಟ್ರ್ಯಾಕ್ಟರ್ ರ್ಯಾಲಿಗೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ ಇದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರ್ಯಾಲಿ, ಹೋರಾಟಗಳಿಗೆ ನಿರ್ಬಂಧ ಹೇರಬಾರದು, ಇದು ಪ್ರಜಾಪ್ರಭುತ್ವ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಜಿಲ್ಲಾಡಳಿತ ನಡೆದುಕೊಂಡಿದೆ ಎಂದು ಬೇಸರ ಹೊರಹಾಕಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಜಯ ಮೃತ್ಯುಂಜಯ ಸ್ವಾಮೀಜಿಯ ನೇತೃತ್ವದಲ್ಲಿ ಸಮುದಾಯದವರು ಟ್ರ್ಯಾಕ್ಟರ್ ರ್ಯಾಲಿ ಮೂಲಕ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಘೋಷಣೆ ಮಾಡಿದ್ದಾರೆ. ಇದನ್ನು ನಿಯಂತ್ರಿಸುವ ದೃಷ್ಟಿಯಿಂದ ಜಿಲ್ಲಾಡಳಿತ ಬೆಳಗಾವಿಯಲ್ಲಿ ಟ್ರಾಕ್ಟರ್ ಮತ್ತು ಕ್ರೂಜರ್ ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ಈ ಶ್ರಮವನ್ನು ಪ್ರಶ್ನಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಂಚಮಸಾಲಿ ಮೀಸಲಾತಿಗಾಗಿ ನಾನು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದೇನೆ ಎಂದರು.
ಈಗ ಕಬ್ಬಿನ ಸೀಸನ್ ಆಗಿರುವುದರಿಂದ ಟ್ರ್ಯಾಕ್ಟರ್ ಗಳು ಹೆಚ್ಚು ಓಡಾಡುತ್ತಿರುತ್ತವೆ. ಅಧಿವೇಶನದ ವೇಳೆ ಯಾವುದೇ ಅಪಘಾತ, ದುರ್ಘಟನೆ ಆಗಬಾರದು ಅಂತಾ ಮುಂಜಾಗ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರಬಹುದು ಎಂದು ಸಚಿವರು ಹೇಳಿದರು.
ನಾನು ಈಗಾಗಲೇ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರ ಜೊತೆ ಮಾತನಾಡಿದ್ದೇನೆ. ಹೋರಾಟಕ್ಕೆ ಸಂಬಂಧಪಟ್ಟಂತೆ ನಾನು ಸ್ವಾಮೀಜಿ ಅವರ ಜೊತೆ ಹಾಗೂ ನಮ್ಮ ಸಮಾಜದ ಇತರ ಪಕ್ಷಗಳ ನಾಯಕರ ಜೊತೆಗೂ ನಿರಂತರ ಸಂಪರ್ಕದಲ್ಲಿದ್ದೇನೆ. ಇಂತಹ ಗುರುಗಳು ಸಿಕ್ಕಿದ್ದು ನಮ್ಮ ಪುಣ್ಯ. ನಾಳೆ ನಡೆಯಲಿರುವ ಸಮಾವೇಶದಲ್ಲಿ ನಾನು ಖಂಡಿತವಾಗಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು.
ನಾನು ಮಂತ್ರಿ ಆಗಿರುವ ಕಾರಣ ವಿಧಾನಸಭೆ ಕಲಾಪದ ವೇಳೆ ಬಾವಿಗಿಳಿದು ಧರಣಿ ಮಾಡುವುದಕ್ಕೆ ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಯಾರಾದರೂ ವಿಷಯ ಪ್ರಸ್ತಾಪಿಸಿದಾಗ ಧ್ವನಿಯಾಗಿ ಇರುವೆ. ನಾನೂ ಹಾಗೂ ನನ್ನ ತಮ್ಮ ಚನ್ನರಾಜ ಹಟ್ಟಿಹೊಳಿ ಧ್ವನಿಯಾಗಿ ಇರುತ್ತೇವೆ ಎಂದು ಹೆಬ್ಬಾಳಕರ್ ಹೇಳಿದರು.
Previous Articleಸುವರ್ಣ ಸೌಧದಲ್ಲಿ ಅನುಭವ ಮಂಟಪ.
Next Article ಯುವನಿಧಿ ಎಷ್ಟು ಜನರಿಗೆ ಸಿಗುತ್ತದೆ ಗೊತ್ತಾ.