ಬೆಂಗಳೂರು,ಡಿ.19-
ಇದು ಅಂತಿಂಥಾ ವಂಚನೆಯಲ್ಲ. ತನಗಿರುವ ಒಂದೇ ಮನೆಯನ್ನು ಭೋಗ್ಯಕ್ಕೆ ಕೊಡುವುದಾಗಿ 22 ಮಂದಿಗೆ ತೋರಿಸಿ ಅವರಿಂದ ಲಕ್ಷಾಂತರ ರೂಪಾಯಿ ಪಡೆದು ನಾಪತ್ತೆಯಾಗಿದ್ದ ಖದೀಮ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹೆಬ್ಬಾಳ ಸಮೀಪದ ಚೋಳನಾಯಕನ ಹಳ್ಳಿಯಲ್ಲಿರುವ ತನ್ನ ಮನೆಯನ್ನು ಭೋಗ್ಯಕ್ಕೆ ನೀಡುವುದಾಗಿ ಕಳೆದ ವರ್ಷಾಂತ್ಯದಲ್ಲಿ ಮನೆಯ ಮಾಲೀಕ ಗಿರೀಶ್ ನೋ ಬ್ರೋಕರ್ ಆ್ಯಪ್‌ನಲ್ಲಿ ಜಾಹೀರಾತು ನೀಡಿದ್ದ.
ಅದನ್ನು ಗಮನಿಸಿದ್ದ ಕೆಲವರು ಮನೆ ಪಡೆಯಲು ಗಿರೀಶನಿಗೆ ಕರೆ ಮಾಡಿ ವಿಚಾರಿಸಿದ್ದರು. ಹೀಗೆ ಕರೆ ಮಾಡಿದ ಎಲ್ಲರಿಗೂ ಮನೆ ಭೋಗ್ಯಕ್ಕೆ ನೀಡುವುದಾಗಿ ನಂಬಿಸಿದ್ದ ಆರೋಪಿ, ಒಬ್ಬೊಬ್ಬರಿಂದ 8 ರಿಂದ 13 ಲಕ್ಷದವರೆಗೂ ಹಣ ಪಡೆದುಕೊಂಡಿದ್ದಾನೆ.
ಹಣ ಕೊಟ್ಟವರು ನಮಗೆ ವಾಸಕ್ಕೆ ಮನೆ ಕೊಡಿ ಎಂದಾಗ ‘ಮನೆ ರಿನೋವೇಶನ್ ಆಗುತ್ತಿದೆ. ಈಗಿರುವ ಬಾಡಿಗೆದಾರರ ಜೊತೆ ಹಣದ ವಿಚಾರವಾಗಿ ಸಮಸ್ಯೆಯಾಗಿದೆ. ತಂದೆ ತೀರಿಕೊಂಡಿದ್ದಾರೆ’ ಎಂದು ಕಾರಣ ನೀಡುತ್ತಾ ಬಂದಿದ್ದಾರೆ.
ಆರೋಪಿಯ ಕಾರಣಗಳನ್ನ ಕೇಳಿ ಬೇಸತ್ತ ಬಳಿಕ ಅನೇಕರು ತಮ್ಮ ಹಣ ವಾಪಸ್ ಕೇಳಿದ್ದರು. ಅಂತವರಿಗೆ ಹಣ ವಾಪಸ್ ನೀಡುವುದಾಗಿ ನಂಬಿಸುತ್ತಿದ್ದ ಗಿರೀಶ್, ತನ್ನ ಪತ್ನಿ ದೀಪಾ, ನಾದಿನಿ ರೂಪಾ, ಸರಿತಾ ಹೆಸರಿನಲ್ಲಿ ನಕಲಿ ಸಹಿ, ಇಲ್ಲವೇ ತಪ್ಪಾದ ಹೆಸರಿನ ಚೆಕ್ ನೀಡುತ್ತಿದ್ದ.ಈ ಕಾರಣದಿಂದ ಆ ಚೆಕ್ ಗಳು ಬ್ಯಾಂಕ್ ನಲ್ಲಿ ಅಮಾನ್ಯಗೊಂಡಿವೆ.
ಇದು ಮೋಸ ಮಾಡಲು ಅನುಸರಿಸುತ್ತಿರುವ ಕ್ರಮ ಎಂದು ಅರಿತುಕೊಂಡ ಕೆಲವರು ತಮಗಾದ ಮೋಸದ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೋ ಬ್ರೋಕರ್ ಆ್ಯಪ್ ಮೂಲಕ ಭೋಗ್ಯಕ್ಕೆ ಮನೆ ಕೊಡುವ ಹೆಸರಲ್ಲಿ ಬರೋಬ್ಬರಿ 2 ಕೋಟಿ ರೂ.ಗಳಷ್ಟು ಹಣ ಪಡೆದು ವಂಚಿಸಿರುವ ಅಂಶ ಬೆಳಕಿಗೆ ಬಂದಿದೆ.
ಈ ಕಾರಣದ ಮೇಲೆ ಆತನನ್ನು ಪೊಲೀಸರು ಬಂಧಿಸಿದ ನಂತರ ಇನ್ನೂ ಅನೇಕರು ಪೊಲೀಸರನ್ನು ಸಂಪರ್ಕಿಸಿ ಈತನಿಂದ ವಂಚನೆಗೊಳಗಾದ ಬಗ್ಗೆ ಮಾಹಿತಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.
Previous Articleಬಾಂಬ್ ಬೆದರಿಕೆ ಹಾಕಿದರೆ ಜೋಕೆ.
Next Article ರಾಜ್ಯದಲ್ಲಿ 159 ಮಂದಿ ಬಾಂಗ್ಲಾ, ಪಾಕ್ ಪ್ರಜೆಗಳು.