ಬೆಂಗಳೂರು,ಡಿ.23:
ಕಾರ್ಮಿಕರ ಪಿಎಫ್ ಹಣ ಪಾವತಿಸದೆ ವಂಚಿಸಿರುವ ಆರೋಪದಲ್ಲಿ ಬಂಧನ ಭೀತಿಗೆ ಸಿಲುಕಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ನನಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಆಪಾದಿಸಿದ್ದಾರೆ.
ಸೆಂಟಾರಸ್ ಲೈಫ ಸ್ಟೈಲ್ ಬ್ರ್ಲಾಂಡ್ಸ್ ಪ್ರೈವೇಟ್ ಲಿ. ಸಂಸ್ಥೆಯ ಕಾರ್ಮಿಕರ ಪಿಎಫ್ ವಂತಿಗೆ ಪಾವತಿಸದ ಆರೋಪದಲ್ಲಿ ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಪಿಎಫ್ಓ ರಿಜಿನಲ್ ಕಮಿಷನರ್ ಷಡಾಕ್ಷರಿ ಗೋಪಾಲ ರೆಡ್ಡಿ ಅವರು ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಈ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ರಾಬಿನ್ ಉತ್ತಪ್ಪ ತಾವು ಹಣಕಾಸಿನ ನೆರವಿನ ಕಾರಣಕ್ಕೆ ಸ್ಟಾಬೆರ್ರಿ ಲೆನ್ಸೆರಿಯಾ ಪ್ರೈವೇಟ್ ಲಿ., ಸೆಂಟಾರಸ್ ಲೈಫ ಸ್ಟೈಲ್ ಬ್ರ್ಲಾಂಡ್ಸ್ ಪ್ರೈವೇಟ್ ಲಿ., ಬೆರ್ರಿಜ್ ಫ್ಯಾಶನ್ ಹೌಸ್ ಕಂಪನಿಗಳಿಗೆ ನಾನು 2018-19ರಲ್ಲಿ ನಿರ್ದೇಶನಕಾಗಿ ನೇಮಕಗೊಂಡಿದ್ದೆ. ಆದರೆ, ಕಾರ್ಯನಿರ್ವಾಹಕನಾಗಿ ಇರಲಿಲ್ಲ ಮತ್ತು ಕಂಪನಿಯ ದೈನಂದಿನ ವ್ಯವಹಾರದಲ್ಲಿ ನನಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಈ ಕಂಪನಿಗಳು ನಾನು ಸಾಲದ ರೂಪದಲ್ಲಿ ನೀಡಿದ್ದ ಹಣವನ್ನು ಮರುಪಾವತಿಸಲು ವಿಫಲವಾಗಿವೆ. ಹಣ ವಾಪಸ್ ಕೊಡುವಂತೆ ನಾನು ಮಾಡಿದ ಮನವಿಗಳಿಗೆ ಅವರು ಉತ್ತರ ನೀಡಿಲ್ಲ ಈ ಹಿನ್ನೆಲೆಯಲ್ಲಿ ಹಣ ಕೊಡಿಸುವಂತೆ ಆಗ್ರಹಿಸಿ ಕೋರ್ಟ್ ಮೊರೆ ಹೋಗಿದ್ದೇನೆ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಅಲ್ಲದೆ,ಕಂಪನಿಯ ನಿರ್ದೇಶಕ ಹುದ್ದೆಗೆ ಕೆಲ ವರ್ಷಗಳ ಹಿಂದೆಯೇ ನಾನು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಕಂಪನಿಗೆ ಸಂಬಂಧಿಸಿದಂತೆ ಪಿಎಫ್ ವಂತಿಗೆ ಪಾವತಿಸದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದು ನನ್ನ ಕಾನೂನು ತಂಡ ಈಗಾಗಲೇ ಉತ್ತರ ನೀಡಿದೆ. ಕಂಪನಿ ಜೊತೆ ನನಗೆ ಸಂಬಂಧವಿಲ್ಲ ಎಂಬುದನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. ನನ್ನ ವಿಚಾರದಲ್ಲಿ ಸರಿಯಾದ ಮಾಹಿತಿ ಇಲ್ಲದೆ ಸುದ್ದಿ ಹರಡದಿರಿ ಎಂದು ಮನವಿ ಮಾಡಿದ್ದಾರೆ.
Previous Articleಹೀಗೂ ಹೇಳಿದ್ದಾರಾ ಸಿ.ಟಿ ರವಿ.?
Next Article ಹೊಸ ವರ್ಷದ ಸಂಭ್ರಮಕ್ಕೆ ಕಿಡಿಗೇಡಿಗಳ ಕೆಂಗಣ್ಣು.