ಬೆಂಗಳೂರು.
ಸಾಲ ವಸೂಲಾತಿ ಹೆಸರಿನಲ್ಲಿ ರಾಜ್ಯದ ಹಲವಡೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಡೆಸುತ್ತಿರುವ ಕಿರುಕುಳ ತಡೆಗಟ್ಟುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದಾರೆ.
ರಾಜ್ಯದ ಹಲವಡೆ ನಡೆಯುತ್ತಿರುವ ಕಿರುಕುಳ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ರೂಪಿಸಿರುವ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ತಕ್ಷಣವೇ ಜಾರಿಗೊಳಿಸಲು ನಡೆಸಿದ ಪ್ರಯತ್ನಕ್ಕೆ ಇದರಿಂದ ಹಿನ್ನಡೆ ಉಂಟಾಗಿದೆ.
ಕಾನೂನು ಮತ್ತು ಗೃಹ ಇಲಾಖೆ ಜಂಟಿಯಾಗಿ ಸಿದ್ಧಪಡಿಸಿ ರವಾನಿಸಿದ್ದ ಮಸೂದೆಯನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿರುವ ರಾಜ್ಯಪಾಲ ತಾವರ ಚೆಂದ್ ಗೆಹಲೋಟ್ ಅವರು ಮಸೂದೆಯಲ್ಲಿನ ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.
ರಾಜ್ಯಪಾಲರು ರಾಜ್ಯ ಸರ್ಕಾರದ ಉದ್ದೇಶಿತ ಮಸೂದೆಯಲ್ಲಿ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ವಿಧಿಸುವ ದಂಡ ಮತ್ತು ಶಿಕ್ಷೆಯ ಪ್ರಮಾಣದ ಬಗ್ಗೆ ತಕರಾರು ತೆಗೆದಿದ್ದಾರೆ.
ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ 3 ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು ಐದು ಲಕ್ಷ ದಂಡ ಹೇಗೆ ಹಾಕುತ್ತೀರಾ”ಎಂದು ವಿವರಿಸುವಂತೆ ಸೂಚಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ಕೊಡುವಾಗ ಗ್ರಾಹಕರಿಂದ ಯಾವುದೇ ದಾಖಲೆ ಪಡೆದುಕೊಳ್ಳಬಾರದು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ದಾಖಲೆಯಿಲ್ಲದೆ ಸಾಲ ನೀಡಲು ಹೇಗೆ ಸಾಧ್ಯ ಎಂದು ವಿವರಿಸುವಂತೆ ಸೂಚಿಸಿದ್ದಾರೆ.
ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡಿದರೆ ಹತ್ತು ವರ್ಷ ಜೈಲು ಶಿಕ್ಷೆ ನೀಡಲಾಗುವುದು ಎಂದು ತಿಳಿಸಲಾಗಿದೆ ಈ ಶಿಕ್ಷೆಯ ಪ್ರಮಾಣ ವಿಧಿಸಲು ಯಾವುದೇ ತರ್ಕವಿಲ್ಲ ಎಂದು ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳಲು ಈಗಿರುವ ಕಾನೂನುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದಾಗಿದೆ ಹೋಲಿಸರು ಈ ವಿಷಯದಲ್ಲಿ ಸಮರ್ಥವಾಗಿ ಕೆಲಸ ಮಾಡಿದರೆ ಮತ್ತೊಂದು ಕಾನೂನಿನ ಅಗತ್ಯ ಉಂಟಾಗುವುದಿಲ್ಲ ಈ ಬಗ್ಗೆ ಮುಂಬರುವ
ಬಜೆಟ್ ಅಧಿವೇಶನದಲ್ಲಿ ಸಾದಕ-ಬಾಧಕ ಚರ್ಚಿಸಿ ಎಂದು ಸೂಚಿಸಿ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದಾರೆ.