ಬೆಂಗಳೂರು,ಮಾ.12-
ತೈಲ ಬೆಲೆ,ಬಿಡಿ ಭಾಗಗಳ ಬೆಲೆ ಏರಿಕೆ ಸಿಬ್ಬಂದಿ ವೇತನ,ಬಸ್ ಗಳ ನಿರ್ವಹಣೆ ವೆಚ್ಚ ಇನ್ನಿತರ ಕಾರಣಗಳಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಧೀನದಲ್ಲಿರುವ ನಾಲ್ಕು ಸಾರಿಗೆ ನಿಗಮಗಳು 5200 ಕೋಟಿ ನಷ್ಟದಲ್ಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಧಾನಪರಿಷತ್ ನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕಳೆದ 5 ವರ್ಷಗಳಲ್ಲಿ ಕೆಎಸ್ಆರ್ಟಿಸಿ 1500 ಕೋಟಿ, ಬಿಎಂಟಿಸಿ 1544 ಕೋ. ಕೆಕೆಆರ್ಟಿಸಿಗೆ 777 ಕೋ.ಮತ್ತು ,ಎನ್ಡಬ್ಲೂಕೆಆರ್ಟಿಸಿಗೆ 1386 ಕೋಟಿ ನಷ್ಟವಾಗಿದೆ ಎಂದು ತಿಳಿಸಿದರು.
ನಾಲ್ಕೂ ನಿಗಮಗಳ ಶೇ 40 ರಷ್ಟು ಬಸ್ಗಳು ನಷ್ಟದಲ್ಲೇ ಓಡುತ್ತಿವೆ. ಶೇ 30ರಷ್ಟು ಬಸ್ಗಳು ಯಾವುದೇ ಲಾಭ-ನಷ್ಟ ಇಲ್ಲದೆ ಓಡುತ್ತಿವೆ. ಶೇ 30ರಷ್ಟು ಬಸ್ಗಳು ಮಾತ್ರ ಲಾಭದಲ್ಲಿವೆ. ಸಾರಿಗೆ ಇಲಾಖೆಯಲ್ಲಿ ಪ್ರತಿದಿನ 9.45 ಕೋಟಿ ರೂ. ಖರ್ಚು ಇದೆ. ಸರ್ಕಾರದಿಂದ ಶಕ್ತಿ ಯೋಜನೆಯ ಪೂರ್ತಿ ಮೊತ್ತ ಪಡೆಯಬೇಕಿದೆ ಎಂದು ವಿವರಿಸಿದರು
ನಷ್ಟ ಸರಿದೂಗಿಸಲು ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಪುನಶ್ವೇತನಕ್ಕೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಶಕ್ತಿ ಯೋಜನೆಗೆ 2024-25ನೇ ಸಾಲಿನಲ್ಲಿ ಮೀಸಲಿಟ್ಟಿದ್ದ 9,978 ಕೋಟಿ ಅನುದಾನ ಪೈಕಿ ಇನ್ನೂ 2 ಸಾವಿರ ಕೋಟಿ ಬಿಡುಗಡೆಯಾಗಬೇಕಿದೆ.ಅನುದಾನ ಮಂಜೂರಾದ ಬಳಿಕ ಸಾರಿಗೆ ನಿಗಮಗಳಿಗೆ ನೀಡಲಾಗುವುದು ಎಂದು ಉತ್ತರಿಸಿದರು.
ಶಕ್ತಿ ಯೋಜನೆಗೆ 9,978 ಕೋಟಿ ರೂಪಾಯಿ ಖರ್ಚಾಗಿದೆ. 448 ಬಿಎಂಟಿಸಿ ಬಸ್ ಖರೀದಿ ಮಾಡಿದ್ದೇವೆ. 2016ರ ಬಳಿಕ 10 ಸಾವಿರ ಮಂದಿಯನ್ನು ನೇಮಕ ಮಾಡಿಕೊಂಡಿದ್ದೇವೆ. ಹೊಸದಾಗಿ 5,360 ಬಸ್ ಖರೀದಿಸಲಾಗಿದೆ. ಬಸ್ಗಳು ಮೊದಲು 1.40 ಸಾವಿರ ಟ್ರಿಪ್ ಸಂಚರಿಸುತ್ತಿದ್ದವು.
ಈಗ 1.90 ಲಕ್ಷ ಟ್ರಿಪ್ ಪ್ರತಿದಿನ ಸಂಚರಿಸುತ್ತಿವೆ. 40ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಜಯದೇವ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಗುತ್ತಿದೆ. ಆರೋಗ್ಯ ಯೋಜನೆಗೆ ಒಂದು ತಿಂಗಳಿಗೆ ಸಿಬ್ಬಂದಿಯಿಂದ 650 ರೂ. ಪಡೆಯಲಾಗುತ್ತಿದೆ. ಸಿಬ್ಬಂದಿಯ ಇಡೀ ಕುಟುಂಬಕ್ಕೆ ಚಿಕಿತ್ಸೆ ನೀಡಲು ಇದು ಸಹಾಯವಾಗಿದೆ ಎಂದು ಹೇಳಿದರು.
Previous Articleಚಿನ್ನ ಸಾಗಿಸುವ ಕೊರಿಯರ್ ರನ್ಯಾ
Next Article ತಂದೆ -ತಾಯಿಯನ್ನು ನೋಡಿಕೊಳ್ಳದಿದ್ದರೆ ಅಷ್ಟೇ