ಮಹಾರಾಷ್ಟ್ರ: ಪುಣೆ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಎರಡು ಪ್ರತ್ಯೇಕ ದುರಂತದಲ್ಲಿ 9 ಮಂದಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಚಸ್ಕಮಾನ್ ಮತ್ತು ಭಟ್ಘರ್ ಅಣೆಕಟ್ಟಿನ ಹಿನ್ನೀರು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭೀಮಾ ನದಿಯ ಚಸ್ಕಮಾನ್ ಅಣೆಕಟ್ಟಿನ ಹಿನ್ನೀರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಗುರುವಾರ ಸಂಜೆ 4 ಗಂಟೆ ಸುಮಾರಿಗೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಮತ್ತೊಂದೆಡೆ ವೆಲ್ವಂಡಿ ನದಿಯ ಭಟ್ಘರ್ ಅಣೆಕಟ್ಟಿನ ಹಿನ್ನೀರಿನಲ್ಲಿ ಐವರು ಮಹಿಳೆಯರು ಮುಳುಗಿ ಕೊನೆಯುಸಿರೆಳೆದಿದ್ದಾರೆ ಎಂದು ಪುಣೆ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ಕೃಷ್ಣಮೂರ್ತಿ ಫೌಂಡೇಶನ್‌ನ ಸಹ್ಯಾದ್ರಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಹತ್ತನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಗುಂಡಲವಾಡಿ ಪ್ರದೇಶಕ್ಕೆ ಈಜಲು ತೆರಳಿದ್ದರು. ಈಜು ಬರದೆ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ.
ನರೇಗಾಂವ್ ಗ್ರಾಮಕ್ಕೆ ಸಂಬಂಧಿಕರೊಬ್ಬರ ಮದುವೆಗೆ ಬಂದಿದ್ದ ಐವರು ಮಹಿಳೆಯರು, ಭಟ್ಘರ್ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಬಹಿರ್ದೆಸೆಗೆ ತೆರಳಿದ್ದಾಗ ಆಯತಪ್ಪಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.