ಹೈದರಾಬಾದ್: ಅಪರೂಪ ಮತ್ತು ಅಚ್ಚರಿಯ ಬೆಳವಣಿಗೆಯಲ್ಲಿ ತೆಲಂಗಾಣ ಹೈಕೋರ್ಟ್‌ನ ಮೂವರು ನ್ಯಾಯಾಧೀಶರು ಒಂದೇ ದಿನ ಒಂದೇ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಇದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮೊದಲು ಎನ್ನಲಾಗಿದೆ,ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತಿತರರು ದೋಷಿಗಳಾಗಿರುವ ಓಬಳಾಪುರಂ ಅಕ್ರಮ ಗಣಿಕೆಗಾರಿಕೆ ಪ್ರಕರಣ ಇದಾಗಿದೆ.
ಜೈಲು ಶಿಕ್ಷೆ ಅನುಭವಿಸುತ್ತಿರುವ ತಪ್ಪಿತಸ್ಥರು ಸಲ್ಲಿಸಿದ ಮೇಲ್ಮನವಿಗಳನ್ನು ವಿಚಾರಣೆ ನಡೆಸಲು ಮೂವರು ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ.
ಗಾಲಿ ಜನಾರ್ದನ ರೆಡ್ಡಿ, ಬಿ.ವಿ.ಶ್ರೀನಿವಾಸ ರೆಡ್ಡಿ, ಮೆಫಾಜ್ ಅಲಿ ಖಾನ್, ವಿ.ಡಿ.ರಾಜಗೋಪಾಲ್ ಮತ್ತು ಓಬಳಾಪುರಂ ಮೈನಿಂಗ್ ಕಂಪನಿಗೆ (ಒಎಂಸಿ) ಸಿಬಿಐ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮೇ 6ರಂದು ನೀಡಿದ ತೀರ್ಪನ್ನು ಅಮಾನತುಗೊಳಿಸಿ ಜಾಮೀನು ನೀಡುವಂತೆ ಕೋರಿ ಶಿಕ್ಷೆಗೆ ಒಳಗಾದವರು ಅರ್ಜಿ ಸಲ್ಲಿಸಿದ್ದಾರೆ.
ಪೀಠದಿಂದ ಪೀಠಕ್ಕೆ ಅರ್ಜಿ ಜಂಪ್: ಬುಧವಾರ ಜಾಮೀನು ಅರ್ಜಿಗಳ ವಿಚಾರಣೆ ನಿಗದಿಯಾಗಿತ್ತು. ಮೊದಲು ನ್ಯಾಯಮೂರ್ತಿ ಕೆ.ಶರತ್ ಅವರ ಪೀಠಕ್ಕೆ ಪ್ರಕರಣವನ್ನು ವಹಿಸಲಾಯಿತು. ಬಳಿಕ, ಅವರು ಅರ್ಜಿಗಳನ್ನು ಬೇರೆ ನ್ಯಾಯಾಧೀಶರ ಮುಂದಿಡಲು ರಿಜಿಸ್ಟ್ರಿಗೆ ಸೂಚಿಸಿದರು.
ನಂತರ, ಪ್ರಕರಣವನ್ನು ನ್ಯಾಯಮೂರ್ತಿ ಅಲಿಸೆಟ್ಟಿ ಲಕ್ಷ್ಮಿನಾರಾಯಣ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲಾಯಿತು. ಸಂಜೆ 7 ಗಂಟೆಗೆ ಸಮಯ ಕೂಡ ಫಿಕ್ಸ್ ಮಾಡಲಾಯಿತು. ನ್ಯಾಯಾಧೀಶರು ಅರ್ಜಿಗಳ ವಿಚಾರಣೆಯಿಂದ ಹಿಂದೆ ಸರಿದು, ಬೇರೆ ಪೀಠದ ಮುಂದೆ ಇಡುವಂತೆ ತಾಕೀತು ಮಾಡಿದರು.
ಬಳಿಕ, ನ್ಯಾಯಮೂರ್ತಿ ನಾಗೇಶ್ ಭೀಮಪಾಕ ಅವರಿದ್ದ ಪೀಠದ ಮುಂದೆ ಪ್ರಕರಣವನ್ನು ಒಯ್ಯಲಾಯಿತು. ಇಬ್ಬರು ನ್ಯಾಯಾಧೀಶರು ಈಗಾಗಲೇ ವಿಚಾರಣೆಯಿಂದ ಹಿಂದೆ ಸರಿದಿರುವ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣದ ಕಡತಗಳನ್ನು ಪರಿಶೀಲಿಸಿದ ನಂತರ, ನ್ಯಾಯಮೂರ್ತಿ ಭೀಮಪಾಕ ಅವರು ಕೂಡ ತಾವೀ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.
Previous Articleವಿಧಾನ ಪರಿಷತ್ ಸದಸ್ಯರಿಗೆ ಬಿಸಿ ಮುಟ್ಟಿಸಿದ ಹೈಕಮಾಂಡ್.
Next Article Honey trap ಪ್ರಕರಣ ಏನಾಯ್ತು ಗೊತ್ತಾ ?
