Thug Life Movie: ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರದ ಬಿಡುಗಡೆಯು ಕರ್ನಾಟಕದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿದೆ. ಕನ್ನಡದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಕನ್ನಡ ಪರ ಸಂಘಟನೆಗಳು ಚಿತ್ರಮಂದಿರಗಳಿಗೆ ಬೆದರಿಕೆ ಹಾಕಿವೆ. ಆದರೂ, ಕೆಲವು ಚಿತ್ರಮಂದಿರಗಳು ಚಿತ್ರವನ್ನು ಪ್ರದರ್ಶಿಸಲು ನಿರ್ಧರಿಸಿವೆ.‘ಥಗ್ ಲೈಫ್’ ಸಿನಿಮಾ (Thug Life) ಮುಂದಿನ ವಾರ (ಜೂನ್ 5) ರಿಲೀಸ್ ಆಗಲಿದೆ. ಕನ್ನಡದ ಬಗ್ಗೆ ಕಮಲ್ ಹಾಸನ್ ನೀಡಿದ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಕಮಲ್ ಹಾಸನ್ ಅವರು ಕ್ಷಮೆ ಕೇಳುವ ಮಾತೇ ಇಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡಿದರೆ ಥಿಯೇಟರ್ ಸುಡುವ ಎಚ್ಚರಿಕೆಯನ್ನು ಕನ್ನಡ ಪರ ಸಂಘಟನೆಗಳು ನೀಡಿವೆ. ಈ ಉದ್ವಿಘ್ನ ವಾತಾವರಣದ ನಡುವೆಯೂ ಈ ಚಿತ್ರವನ್ನು ಪ್ರದರ್ಶನ ಮಾಡಲು ಕರ್ನಾಟಕದ ಕೆಲವು ಥಿಯೇಟರ್ಗಳು ಮುಂದಾಗಿವೆ.ಥಗ್ ಲೈಫ್’ ಚಿತ್ರದ ಪ್ರಚಾರದ ವೇಳೆ ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಮಾತನಾಡಿದ್ದರು ಕಮಲ್ ಹಾಸನ್. ಇದನ್ನು ಗುರಿಯಾಗಿಸಿಕೊಂಡು ಕನ್ನಡಿಗರು ಅವರ ಮೇಲೆ ತಿರುಗಿ ಬಿದ್ದಿದ್ದಾರೆ. ಕನ್ನಡಕ್ಕೆ ಅವಮಾನ ಆಗಿದೆ ಎನ್ನುವ ಆರೋಪವನ್ನು ಅನೇಕರು ಮಾಡಿದ್ದಾರೆ. ಆದರೆ, ಪಟ್ಟು ಬಿಡದ ಕಮಲ್ ಹಾಸನ್, ‘ನಾನು ತಪ್ಪು ಮಾಡಿಲ್ಲ, ಬೆದರಿಕೆ ಹೆದರಲ್ಲ, ಕ್ಷಮೆ ಕೇಳಲ್ಲ’ ಎಂದಿದ್ದಾರೆ.ಮೇ 30ರಂದು ಸುದ್ದಿಗೋಷ್ಠಿ ನಡೆಸಿದ ಕರವೇ ಅಧ್ಯಕ್ಷ ನಾರಾಯಣಗೌಡ, ಯಾವುದಾದರೂ ಚಿತ್ರಮಂದಿರಗಳು ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದಲ್ಲಿ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಕೆಲವರು ಈ ಸಾಹಸಕ್ಕೆ ಮುಂದಾಗುತ್ತಿದ್ದಾರೆ.