ಬೆಂಗಳೂರು:
ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಪ್ರತೀ ಹಂತದಲ್ಲಿಯೂ ಕಮೀಶನ್ ಹಾವಳಿಯಿದ್ದು ಭ್ರಷ್ಟಾಚಾರ ಮಿತಿಮೀರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ್ ಅವರು ಹೇಳಿರುವ ಮಾತುಗಳೇ ಸಾಕ್ಷಿ. ಅವರು ಹೇಳಿರುವ ಮಾತುಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ವಸತಿ ಇಲಾಖೆಯಲ್ಲಿ ಕಮಿಷನ್ ಹಾವಳಿ ಎಷ್ಟಿದೆ ಎಂಬ ವಿಚಾರವಾಗಿ ಆಡಿಯೋ ವೈರಲ್ ಆಗಿದೆ. ಇದರಿಂದ ನನಗೆ ಯಾವುದೇ ಆಶ್ಚರ್ಯ ಆಗಿಲ್ಲ ಎಂದು ಅವರು ಹೇಳಿದರು.
ಕಮೀಷನ್ ನಿರಂತರವಾಗಿ ನಡೆಯುತ್ತಿದೆ. ವಸತಿ ಇಲಾಖೆಯಲ್ಲಿ ಸೈಟ್ ಕೊಡಬೇಕಾದರೆ, ದುಡ್ಡು ಕೊಡಬೇಕಾದರೆ ಕಮಿಷನ್ ನಡೆಯುತ್ತಿದೆ. ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಇದು ನಡೆಯುತ್ತಿದೆ ಎಂದು ಹೇಳಿದರು.
ಬಿ.ಆರ್.ಪಾಟೀಲ್ ಹೇಳಿರುವುದು ನಿಜ. ವಸತಿ ಇಲಾಖೆಯಲ್ಲಿ ಹಣ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನು ನಾನಾಗಲಿ, ವಿರೋಧ ಪಕ್ಷವಾಗಲಿ ಹೇಳುತ್ತಿಲ್ಲ. ಸಾಕ್ಷಾತ್ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು, ಮುಖ್ಯಮಂತ್ರಿಗಳ ಸಲಹೆಗಾರರೇ ಹೇಳಿದ್ದಾರೆ. ಈಗ ಚೆನ್ನಾಗಿ ಹಣ ಲೂಟಿ ಹೊಡೆದರೆ ಮುಂದೆ Election ನಡೆಸಬಹುದು ಎಂಬುದು ಇವರ ಉದ್ದೇಶ ಎಂದು ಅವರು ಕಿಡಿಕಾರಿದರು.
ಕಂದಾಯ ಮಂತ್ರಿ ಕೃಷ್ಣ ಬೇರೇಗೌಡ ಏನು ಹೇಳಿದ್ದಾರೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾವ ಯಾವುದಕ್ಕೆ ಎಷ್ಟೆಷ್ಟು ರೇಟ್ ಫಿಕ್ಸ್ ಮಾಡಿದ್ದಾರೆ ಎಂದು ಅವರು ನೇರವಾಗಿ ಹೇಳಿದ್ದಾರೆ. ತಮ್ಮ ಇಲ್ಲಾಖೆಗಳಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಆಯಾ ಇಲಾಖೆಯ ಮಂತ್ರಿಗಳಿಗೆ ಗೊತ್ತಿದೆ. ಕೃಷ್ಣಭೈರೇಗೌಡರ ಇಲಾಖೆಯಲ್ಲಿ ಯಾವ ರೀತಿ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳಿದ್ದಾರೆ. ಈ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ ಎಂದು ಅವರು ಪ್ರಶ್ನಿಸಿದರು.
Previous Articleಬಿಜೆಪಿ ನಾಯಕರಿಗೆ ಜಮೀರ್ ಅಹಮದ್ ಖಾನ್ ತಿರುಗೇಟು ?
Next Article ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.