ಬೆಂಗಳೂರು:
ರಾಜ್ಯದ ಖಾಸಗಿ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದರೆ ಐದು ವರ್ಷ ಸರ್ಕಾರ ವಶಕ್ಕೆ ಪಡೆಯಲು ಅವಕಾಶ ಇದೆ. ಇದೇ ತತ್ವವನ್ನು ಆಧರಿಸಿ ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಶಕ್ಕೆ ಪಡೆಯಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಐತಿಹಾಸಕ ಗಾಳಿ ಆಂಜನೇಯ ಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದಿರುವುದಕ್ಕೆ ಟ್ರಸ್ಟ್ ಪದಾಧಿಕಾರಿಗಳು ಭಕ್ತರಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿರುವುದಕ್ಕೆ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವರು, ಖಾಸಗಿ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದರೆ ಐದು ವರ್ಷ ಸರ್ಕಾರ ವಶಕ್ಕೆ ಪಡೆಯಲು ಅವಕಾಶ ಇದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಸುಮಾರು 1.85 ಲಕ್ಷ ದೇವಸ್ಥಾನಗಳಲ್ಲಿ 35 ಸಾವಿರ ಮುಜರಾಯಿಗೆ ಒಳಪಟ್ಟಿವೆ. ಉಳಿದ 1,50 ಲಕ್ಷ ಖಾಸಗಿ ದೇವಸ್ಥಾನಗಳಾಗಿವೆ. ಖಾಸಗಿ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದರೆ ಐದು ವರ್ಷ ಸರ್ಕಾರ ವಶಕ್ಕೆ ಪಡೆಯಲು ಅವಕಾಶ ಇದೆ ಎಂದು ಹೇಳಿದರು.
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿದೆ. ಹಣ ತೆಗೆದುಕೊಂಡು ಹೋಗುತ್ತಿದ್ದ ವಿಡಿಯೋ ನೀವೇ ನೋಡಿದ್ದೀರಿ, ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳಾಗಿವೆ ಆದ್ದರಿಂದಲೇ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.
ಐದು ವರ್ಷ ಆದ ಮೇಲೆ ದೇವಸ್ಥಾನವನ್ನು ಮರಳಿ ಟ್ರಸ್ಟ್ ಗೆ ವಾಪಸ್ ಕೊಡುತ್ತೇವೆ. ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಎಂಟು ದೇವಸ್ಥಾನಗಳನ್ನು ವಶಕ್ಕೆ ಪಡೆದಿತ್ತು. ಅವ್ಯವಹಾರ ನಡೆದಿತ್ತು ಎನ್ನುವ ಕಾರಣದಿಂದ ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದುಕೊಂಡು ವಾಪಾಸ್ ಕೊಟ್ಟಿದೆ. ಖಾಸಗಿ ದೇವಸ್ಥಾನಗಳಲ್ಲಿ ಅವ್ಯಹಾರ ನಡೆದಾಗ ವಶಕ್ಕೆ ಪಡೆಯುವ ಅಧಿಕಾರ ಸರ್ಕಾರಕ್ಕೆ ಇದೆ ಎಂದರು.
ಬಿಜೆಪಿ ಸರ್ಕಾರ ದೇವಾಲಯ ಸುಪರ್ದಿಗೆ ಪಡಿಸಿಕೊಂಡಾಗ ಏಕೆ ಮಾತನಾಡಿಲ್ಲ? ಗಾಳಿ ಆಂಜನೇಯ ದೇವಸ್ಥಾನದಲ್ಲಿ 25 ವರ್ಷಗಳಿಂದ ಅವ್ಯವಹಾರ ನಡೆಯುತ್ತಿದೆ. ಆಡಳಿತ ಮಂಡಳಿಯವರು ದೇವಸ್ಥಾನವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರೆ ವಾಪಾಸ್ ಕೊಡುತ್ತೇವೆ ಎಂದು ಭರವಸೆ ನೀಡಿದರು.
Previous Articleಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !
Next Article ಪೊಲೀಸ್ ಆಡಳಿತಕ್ಕೆ ಮೇಜರ್ ಸರ್ಜರಿ.