ಬೆಂಗಳೂರು,ಆ.12:
ಪರಿಶಿಷ್ಟ ಜಾತಿಗಳ ಕಡು ಬಡವ ಕುಟುಂಬದ ಮಹಿಳೆಯರಿಗೆ ಕೃಷಿ ಭೂಮಿ ಉಚಿತವಾಗಿ ನೀಡುವ ರಾಜ್ಯ ಸರ್ಕಾರದ ಯೋಜನೆಗೆ ಕನ್ನ ಹಾಕಿ ಕೋಟ್ಯಾಂತರ ರೂಪಾಯಿ ಲಪಟಾಯಿಸಿದ ಅಧಿಕಾರಿಗಳಿಗೆ ಇದೀಗ ಸಂಕಷ್ಟ ಎದುರಾಗಿದೆ.
ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಭೂಮಿಯನ್ನು ಖರೀದಿಸಿ ಅದನ್ನು ಭೂ ರಹಿತ ಪರಿಶಿಷ್ಟ ಜಾತಿಗಳ ಕಡುಬಡವ ಮಹಿಳೆಯರಿಗೆ ವಿತರಿಸಲು ಯೋಜನೆಯನ್ನು ರೂಪಿಸಲಾಗಿದೆ ಅದರಂತೆ ಹಲವು ಜಿಲ್ಲೆಗಳಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಭೂಮಿಯನ್ನು ಕರುಣಿಸಿ ಫಲಾನುಭವಿ ಮಹಿಳೆಯರಿಗೆ ವಿತರಿಸಲಾಗುತ್ತಿದೆ.
ಆದರೆ ವಿಜಯಪುರದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಇವರಿಗೆ ಭೂಮಿ ನೀಡಬೇಕು ಎಂದು ಹೇಳಿ ಭೂಮಿ ಖರೀದಿಸಿದ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿಗಳನ್ನು ಲಪಟಾಯಿಸಿರುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಲ್ಲಿಸಿದ್ದ ದೂರು ಆಧರಿಸಿ ತನಿಖೆ ನಡೆಯುತ್ತಿದೆ ಇದರ ನಡುವೆ ವಿಜಯಪುರದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಭೂಮಿ ಖರೀದಿ ಹೆಸರಿನಲ್ಲಿ 25 ಕೋಟಿಗೂ ಅಧಿಕ ಹಣವನ್ನು ಲಪಟಾಯಿಸಿರುವ ಮಾಹಿತಿ ಬೆಳಕಿಗೆ ಬಂದಿದ್ದು ಇದೀಗ ಜಾರಿ ನಿರ್ದೇಶನಾಲಯ ರಂಗ ಪ್ರವೇಶ ಮಾಡಿದೆ.
ಜಾರಿ ನಿರ್ದೇಶನಾಲಯದ ಆರು ತಂಡಗಳು ಬೆಂಗಳೂರು ಮತ್ತು ವಿಜಯಪುರದ ಹಲವಡೆ ದಾಳಿ ನಡೆಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ವಿಜಯಪುರದಲ್ಲಿ ಸುಮಾರು 25 ಕೋಟಿ ರೂಪಾಯಿಗಳನ್ನು ಭೂಮಿ ಖರೀದಿಗೆ ವೆಚ್ಚ ಮಾಡಲಾಗಿದೆ ಎಂದು ತೋರಿಸಿರುವ ಅಧಿಕಾರಿಗಳು ಈ ಭೂಮಿಯನ್ನು ಫಲಾನುಭವಿಗಳಿಗೆ ಹಂಚಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಆದರೆ ಯಾವುದೇ ಒಬ್ಬ ಫಲಾನುಭವಿಗೂ ಭೂಮಿ ನೀಡಿಲ್ಲ ಎಂಬುದು ಪತ್ತೆಯಾಗಿದೆ
Previous Articleಕಾಂಗ್ರೆಸ್ ಹೈಕಮಾಂಡ್ ಸಂದೇಶ ಗೊತ್ತಾ ?
Next Article ಮಾಜಿ ಮಂತ್ರಿ ರಾಜಣ್ಣ ಅವರ ಪ್ಲಾನ್ ಗೊತ್ತಾ ?