ಬೆಂಗಳೂರು,ಸೆ.5- ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರು ಹಾಗೂ ಅವರ ಸರಿಯಾದ ದಾಖಲೆಗೆ ಪರಿಶೀಲನೆ ನಡೆಸದೇ ಮನೆ ಬಾಡಿಗೆಗೆ ನೀಡಿರುವ ಮಾಲೀಕರನ್ನು ಪತ್ತೆಹಚ್ಚಿ ಪ್ರಕರಣಗಳನ್ನು ನಗರ ಪೊಲೀಸರು ದಾಖಲಿಸತೊಡಗಿದ್ದಾರೆ.
ನಗರಕ್ಕೆ ಬರುವ ವಿದೇಶಿ ಪ್ರಜೆಗಳು ತಮ್ಮ ಪಾಸ್ ಪೋರ್ಟ್, ವೀಸಾ ಅವಧಿ ಮುಗಿದಿದ್ದರು ಸಹ ಕೆಲವರು ಅಕ್ರಮವಾಗಿ ನಗರದಲ್ಲಿ ವಾಸವಿರುತ್ತಾರೆ. ಈ ವಾಸವಿದ್ದವರೂ ಹಣ ಸಂಪಾದನೆಗೆ ಅನ್ಯ ಮಾರ್ಗಗಳನ್ನು ಹಿಡಿದು ಬಳಿಕ ಪೊಲೀಸರ ಅತಿಥಿಗಳಾದ ಸಾಕಷ್ಟು ಉದಾಹರಣೆಗಳಿವೆ. ಪೊಲೀಸ್ ಠಾಣೆಗೆ ಸಿ ಫಾರಂ ಸಲ್ಲಿಸದೆ, ವಿದೇಶಿ ಪ್ರಜೆಗಳ ದಾಖಲಾತಿ ಪಡೆಯದೆ ಮನೆ ನೀಡಿದ್ದ ಮಾಲೀಕರ ವಿರುದ್ಧ ರಿಜಿಸ್ಟ್ರೇಷನ್ ಆಫ್ ಫಾರಿನರ್ಸ್ ಆ್ಯಕ್ಟ್ ಅಡಿ ಕೇಸ್ ದಾಖಲಾಗಿವೆ.
ಅಮೃತಹಳ್ಳಿ, ಬಾಗಲೂರು, ಸಂಪಿಗೆಹಳ್ಳಿ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿವೆ. ಕೊಡಿಗೆಹಳ್ಳಿ, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ತಲಾ 2, ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ 3, ಕೊತ್ತನೂರು ಪೊಲೀಸ್ ಠಾಣೆಯಲ್ಲಿ 5, ಯಲಹಂಕ ಪೊಲೀಸ್ ಠಾಣೆಯಲ್ಲಿ 7 ಸೇರಿದಂತೆ ಪೂರ್ವ ವಿಭಾಗದಲ್ಲಿ ಒಟ್ಟು 23 ಪ್ರಕರಣ ದಾಖಲಾಗಿವೆ.
ಮಾಲೀಕರಿಗೆ ಗೈಡ್ಲೈನ್ಸ್:
ಇತ್ತೀಚೆಗೆ ವಿದೇಶಿ ಪ್ರಜೆಗಳಿಗೆ ಬಾಡಿಗೆ ಕೊಡುವ ಮನೆ ಮಾಲೀಕರಿಗೆ ವೈಟ್ಫೀಲ್ಡ್ ವಿಭಾಗದ ಡಿಸಿಪಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಮನೆ ಮಾಲೀಕರು ಸಿ ಫಾರಂ ಅನ್ನು ಎಫ್ಆರ್ಆರ್ಓಗೆ ಸಲ್ಲಿಸಬೇಕು. ಬಾಡಿಗೆದಾರರ ಪಾಸ್ಪೋರ್ಟ್, ವೀಸಾ ಪ್ರತಿ ಸಂಗ್ರಹಿಸಬೇಕು. ಬಾಡಿಗೆ ನೀಡುವ ಮೊದಲು ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು.
ವೀಸಾ ಅಥವಾ ಅನುಮತಿ ಇಲ್ಲದೆ ವಾಸಿಸಲು ಅವಕಾಶ ನೀಡಬಾರದು. ನೊಂದಾಯಿತ ಬಾಡಿಗೆ ಒಪ್ಪಂದ ಮಾಡಬೇಕು. ವಿದೇಶಿ ಬಾಡಿಗೆದಾರರ ಬಗ್ಗೆ ಮಾಹಿತಿ ನೀಡದಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಅನುಮಾನಾಸ್ಪದ ಚಟುವಟಿಕೆ ಕಂಡು ಬಂದರೆ ಪೊಲೀಸರಿಗೆ ತಿಳಿಸಬೇಕು ಎಂದು ಗೈಡ್ಲೈನ್ಸ್ ಬಿಡುಗಡೆ ಮಾಡಲಾಗಿತ್ತು.
Previous Articleಹಣಕ್ಕಾಗಿ ಅಪ್ಪನ ಅಶ್ಲೀಲ ಚಿತ್ರ ಸೃಷ್ಟಿಸಿದ ಮಗ
Next Article ನಡು ರಸ್ತೆಯಲ್ಲಿ ಲಾಂಗ್ ಹಿಡಿದ ಮರಿ ರೌಡಿ