ಮಹಾರಾಷ್ಟ್ರ : ತಾನು ಪ್ರೀತಿಸುತ್ತಿದ್ದ ಯುವಕನನ್ನು ಕೊಲೆ ಮಾಡಿದ ನಂತರವೂ ಯುವತಿ ಪ್ರಿಯತಮನ ಶವವನ್ನೇ ವಿವಾಹವಾಗಿರುವ ಘಟನೆ ಮಹಾರಾಷ್ಟ್ರದ ನಾಂದೇಲ್‌ನಲ್ಲಿ ನಡೆದಿದೆ. ಪ್ರಿಯಕರನ ಮೃತದೇಹವನ್ನೇ ಮದುವೆಯಾಗುವ ಮೂಲಕ ಜಾತಿಗ್ರಸ್ತ ಸಮಾಜಕ್ಕೆ ಸವಾಲು ಎಸೆದಿದ್ದಾರೆ.
ಯುವಕ ಸಕ್ಷಮ್ ಮತ್ತು ಯುವತಿ ಅಂಚಲ್ ಬೇರೆ ಬೇರೆ ಜಾತಿಯವರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಯುವತಿಯ ಕುಟುಂಬದವರಿಗೆ ಗೊತ್ತಾಗಿ ಪ್ರಿಯಕರನನ್ನು ಭೇಟಿಯಾಗಲು ಬಿಡುತ್ತಿರಲಿಲ್ಲ. ಇದರ ನಡುವೆಯೂ ಯುವತಿ ಪೋಷಕರ ಕಣ್ಣು ತಪ್ಪಿಸಿ ಪ್ರಿಯಕರನನ್ನು ಭೇಟಿಯಾಗುತ್ತಿದ್ದಳು. ಮದುವೆಯಾಗಲೂ ಮುಂದಾಗಿದ್ದರು. ಇದರಿಂದ ಆಕ್ರೋಶಗೊಂಡ ಯುವತಿಯ ಸಹೋದರರು ಮತ್ತು ತಂದೆ ಯುವಕನಿಗೆ ಗುಂಡು ಹಾರಿಸಿ ಕೊಂದು ಹಾಕಿದರು ಎಂದು ತಿಳಿದುಬಂದಿದೆ.
ವಿಷಯ ತಿಳಿದ ಯುವತಿ ಪ್ರಿಯಕರನ ಮೃತದೇಹ ನೋಡಲು ಬಂದು ಶವಕ್ಕೆ ಹಚ್ಚಲಾಗಿದ್ದ ಕುಂಕುಮವನ್ನೇ ತನ್ನ ಹಣೆಗೂ ಹಚ್ಚಿಕೊಂಡು ಮಾಂಗಲ್ಯ ಧಾರಣೆ ಮಾಡಿಕೊಂಡು ಕೊನೆಯತನಕ ಈತನೇ ನನ್ನ ಗಂಡ, ಪ್ರಿಯಕರನ ಮನೆಯಲ್ಲೇ ನಾನು ಬಾಳ್ವೆ ನಡೆಸುತ್ತೇನೆ. ಪ್ರಿಯಕರನ ತಂದೆ ತಾಯಿಯನ್ನು ನೋಡಿಕೊಳ್ಳುತ್ತೇನೆ ಎಂದು ಶಪಥ ಮಾಡಿದ್ದಾಳೆ.
ನಾವಿಬ್ಬರೂ ಬೇರೆ ಬೇರೆ ಜಾತಿಯವರು. ಇದು ನನ್ನ ತಂದೆ ಗಜಾನನ್ ಮಾಮಿದ್ವಾರ್ ಗೆ ತಿಳಿದು ಸಕ್ಷಮ್‌ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. ಅದರಂತೆಯೇ ನನ್ನ ತಂದೆ ಮತ್ತು ಸಹೋದರರಾದ ಹಿಮೇಶ್ ಹಾಗೂ ಸಾಹಿಲ್ ಸೇರಿ ಹತ್ಯೆ ಮಾಡಿದ್ದಾರೆ. ನನಗೆ ನ್ಯಾಯ ಬೇಕು. ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಅಂಚಲ್ ಒತ್ತಾಯಿಸಿದ್ದಾಳೆ.

