ನವದೆಹಲಿ : ಭಾರತದಲ್ಲಿ ಇನ್ನು ಮುಂದೆ ಉತ್ಪಾದನೆಯಾಗುವ ಮತ್ತು ಮಾರಾಟವಾಗುವ ಎಲ್ಲಾ ಸ್ಮಾರ್ಟ್ ಫೋನ್‌ಗಳಿಗೆ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ ಸೈಬರ್ ಸೆಕ್ಯುರಿಟಿ ಆ್ಯಪ್ ಸಂಚಾರ್ ಸಾಥಿ ಅಳವಡಿಸುವಂತೆ ಸ್ಮಾರ್ಟ್ ಫೋನ್ ಉತ್ಪಾದಕರಿಗೆ ದೂರಸಂಪರ್ಕ ಸಚಿವಾಲಯ ಸೂಚನೆ ನೀಡಿದೆ. ಆ್ಯಪ್ ಇನ್‌ಸ್ಟಾಲ್ ಮಾಡಲು 90 ದಿನಗಳ ಕಾಲಾವಕಾಸ ನೀಡಿ ನ.28ರಂದು ಎಲ್ಲಾ ಸ್ಮಾರ್ಟ್ ಫೋನ್ ಉತ್ಪಾದಕರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್ ಮೂಲಕ ಸಂಚಾರ್ ಸಾಥಿ ಆ್ಯಪ್ ಇನ್‌ಸ್ಟಾಲ್ ಮಾಡಬೇಕೆಂದು ತಿಳಿಸಲಾಗಿದೆ.
ಸಂಚಾರ್ ಸಾಥಿ ಆ್ಯಪ್ ಶಂಕಾಸ್ಪದ ಕರೆಗಳನ್ನು ವರದಿ ಮಾಡಲು, ಐಎಂಇಐ ನಂಬರ್ ಪರಿಶೀಲಿಸಲು ಹಾಗೂ ಕದ್ದ ಮೊಬೈಲ್‌ಗಳನ್ನು ಪತ್ತೆ ಮಾಡಲು ಹಾಗೂ ಬಳಕೆಯನ್ನು ನಿರ್ಬಂಧಿಸಲು ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲ ವಂಚನೆ ಕರೆಗಳನ್ನೂ ತಡೆಯಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
ಸಂಚಾರ್ ಸಾಥಿ ಆ್ಯಪ್ ಇನ್‌ಸ್ಟಾಲ್ ಮಾಡುವುದರಿಂದ ಖಾಸಗಿತನದ ಹಕ್ಕಿಗೆ ಚ್ಯುತಿಯಾಗುತ್ತದೆ ಎಂದು ಆ್ಯಪಲ್ ಮತ್ತು ಖಾಸಗೀತನದ ಹಕ್ಕಿನ ಪ್ರತಿಪಾದಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

