ಬೆಂಗಳೂರು : ಉಪಮುಖ್ಯಮಂತ್ರಿಗಳ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರದ ನಿವಾಸಕ್ಕೆ ಭೇಟಿ ನೀಡಿ ಬೆಳಗಿನ ಉಪಹಾರ ಸೇವಿಸಿದರು. ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಮುಖ್ಯಮಂತ್ರಿಗಳಿಗೆ ಹೂಗುಚ್ಚ ನೀಡಿ ಬರಮಾಡಿಕೊಂಡರು. ಈ ವೇಳೆ ಮಾಜಿ ಸಂಸದ ಡಿ.ಕೆ.ಸುರೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದರು. ಬಳಿಕ ಸಿಎಂ, ಡಿಸಿಎಂ, ಡಿ.ಕೆ.ಸುರೇಶ್ ಮತ್ತು ಕುಣಿಗಲ್ ಶಾಸಕ ಡಾ.ರಂಗನಾಥ್ ಒಟ್ಟಿಗೆ ಕುಳಿತು ಬ್ರೇಕ್ ಫಾಸ್ಟ್ ಮಾಡಿದರು. ಸುಮಾರು 1.20 ನಿಮಿಷಗಳ ಕಾಲ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದರು.
ಉಪಾಹಾರ ಸೇವಿಸಿದ ಬಳಿಕ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ನಾವಿಬ್ಬರು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಭಿನ್ನಮತ ಹಿಂದೆಯೂ ಇಲ್ಲ, ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ. ಒಟ್ಟಾಗಿ ಹೋಗುತ್ತೇವೆ. ಹೈಕಮಾಂಡ್ ನಾಯಕರು ಸಮಯ ಕೊಟ್ಟರೆ ನಾವು ಭೇಟಿ ಆಗುತ್ತೇವೆ ಎಂದರು. ಮಂಗಳೂರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಬರುತ್ತಿದ್ದು ಅವರನ್ನು ಭೇಟಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಉಪಹಾರದ ಸಭೆಯಲ್ಲಿ ಪಕ್ಷದ ವಿಚಾರಗಳ ಕುರಿತು ಚರ್ಚಿಸಿದೆವು. ಡಿ.8 ವಿಧಾನಮಂಡಲದ ಅಧಿವೇಶನ ಆರಂಭವಾಗಿ 2 ವಾರ ನಡೆಯುತ್ತದೆ. ಅಲ್ಲಿ ನಮ್ಮ ತಂತ್ರಗಾರಿಕೆ ಏನಿರಬೇಕು ಎಂಬ ಚರ್ಚೆ ಮಾಡಿದ್ದೇವೆ. ಜೆಡಿಎಸ್, ಬಿಜೆಪಿ ಅವಿಶ್ವಾಸ ನಿರ್ಣಯ ತರಬೇಕೆಂದಿರುವ ವಿಷಯ ಮಾಧ್ಯಮಗಳಿಂದ ತಿಳಿದಿದೆ. ಹಾಗಾಗಿ ನಾವು ಕೂಡ ಪ್ರತಿಪಕ್ಷಗಳನ್ನು ಅಗ್ರೆಸ್ಸೀವ್ ಆಗಿ ಎದುರಿಸಲು ಸಿದ್ದರಾಗಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಯಾವುದೇ ವಿಚಾರ ಪ್ರಸ್ತಾಪ ಮಾಡಿದರು ಅದನ್ನು ಸಮರ್ಥವಾಗಿ ಎದುರಿಸುತ್ತೇವೆ. ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಅಶೋಕ ಪ್ರಸ್ತಾಪಿಸುವ ವಿಷಯಗಳ ಕುರಿತು ಎದುರಿಸಲು ಸಜ್ಜಾಗಿದ್ದೇವೆ ಎಂದು ಹೇಳಿದರು.
ರಾಜ್ಯದ ಸಮಸ್ಯೆಗಳನ್ನು ಪ್ರಾಮಾಣಿಕತೆಯಿಂದ ಬಗೆಹರಿಸಲು ಸಿದ್ದರಿದ್ದೇವೆ. ನಮ್ಮ ಸರ್ಕಾ ರೈತರ ಪರ ಇದೆ. ಕಬ್ಬು ಬೆಳಗಾರರು, ಸಕ್ಕರೆ ಕಾರ್ಖಾನೆಗಳ ಮಾಲಿಕರು ಹಾಗೂ ರೈತ ಮುಖಂಡರ ಜೊತೆ ಮಾತುಕತೆ ನಡೆಸಿದ್ದೇನೆ. ಒಂದು ಟನ್ ಕಬ್ಬಿಗೆ 50ರೂ ಕೊಡಬೇಕೆಂದು ತೀರ್ಮಾನಿಸಿದ್ದೇವೆ ಎಂದರು.
ಮೆಕ್ಕೇಜೋಳ ಖರೀದಿಸುವ ಸಂಬಂಧ ಪೌಲ್ಟ್ರಿ ಫಾರಂ, ಪಶು ಇಲಾಖೆ ಜೊತೆ ಚರ್ಚಿಸಿದ್ದೇವೆ. ಮೆಕ್ಕೇಜೋಳಕ್ಕೆ ಕೇಂದ್ರ ಸರ್ಕಾರ 2400 ರೂಗಳನ್ನು ಬೆಂಬಲ ಬೆಲೆಯಾಗಿ ನಿಗದಿಪಡಿಸಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ 1900, 2000,2100 ರೂಗಳಿಗೆ ಮೆಕ್ಕೇಜೋಳ ಖರೀದಿ ಮಾಡಲಾಗುತ್ತಿದೆ. ಅದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕೊಡಲು ಡಿಸ್ಟಲರಿ ಮಾಲಿಕರಿಗೆ ಒಪ್ಪಿಸಿದ್ದೇವೆ. ಪೌಲ್ಟ್ರಿ ಅವರು ಕೂಡ 20 ಲಕ್ಷ ಹೆಚ್ಚು ಮೆಟ್ರಿಕ್ ಟನ್ ಮೆಕ್ಕೇಜೋಳವನ್ನು ಖರೀದಿಸುತ್ತಾರೆ ಎಂದು ಹೇಳಿದರು. ಡಿಸ್ಟಲರಿ ಮಾಲಿಕರು ನೇರವಾಗಿ ರೈತರಿಂದ ಖರೀದಿ ಮಾಡಲು ಮಾರ್ಕೇಟಿಂಗ್ ಫೆಡರೇಷನ್ ಸಹಾಯ ಮಾಡುತ್ತದೆ. ಮೆಕ್ಕೆಜೋಳವನ್ನು ಪೌಲ್ಟ್ರಿ ಫಾರ್ಮ್ ನವರು ಖರೀದಿ ಮಾಡುತ್ತಾರೆ. ಕೆಎಂಎಫ್ ಖರೀದಿ ಮಾಡುತ್ತದೆ. ಕೋಳಿ ಆಹಾರವನ್ನಾಗಿ ಮೆಕ್ಕೇಜೋಳವನ್ನೇ ಉಪಯೋಗಿಸುವುದು. ಪಶು ಆಹಾರವಾಗಿಯೂ ಉಪಯೋಗಿಸಲಾಗುತ್ತಿದೆ ಎಂದರು.
ಈ ಬಾರಿ ರೈತರು ಮೆಕ್ಕೇಜೋಳ ಹೆಚ್ಚಾಗಿ ಬೆಳೆದಿದ್ದಾರೆ. ಸುಮಾರು 54-55 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಬಹುದು ಎಂಬ ಅಂದಾಜಿದೆ. ಒಟ್ಟಾರೆಯಾಗಿ ಪೌಲ್ಟ್ರಿಯವರು 20 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡುತ್ತಾರೆ. ಪಶು ಆಹಾರ 4-5 ಲಕ್ಷ ಟನ್ ಖರೀದಿ ಮಾಡುತ್ತದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಭೆಯಲ್ಲಿ ರಾಜಕೀಯದ ಕುರಿತು ಚರ್ಚೆ ಮಾಡಿದ್ದೇವೆ. ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಎಂಎಲ್ ಸಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದೇವೆ. ಅದರ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
ಸಭೆಯಲ್ಲಿ ಪಕ್ಷದ ವಿಚಾರವನ್ನೂ ಚರ್ಚಿಸಿದ್ದೇವೆ. ವಿಧಾನಮಂಡಲ ಅಧಿವೇಶನದಲ್ಲಿ ಯಾವ ವಿಚಾರಗಳನ್ನು ತರಬೇಕು. ಯಾವ ರೀತಿಯ ಸಂದೇಶ ಕೊಡಬೇಕು. ಯಾವ ರೀತಿ ಹೋರಾಟ ಮಾಡಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ನಮ್ಮಿಬ್ಬರದು ಒಂದೇ ದನಿ, ಒಂದೇ ಆಚಾರ ಎಂದ ಡಿಕೆಶಿ ಡಿ.8ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಹೇಳಿದರು.

