ಜನ ಸುಮ್ಮನಿದ್ದಾಗ ಏನಾದ್ರೂ ಮಾಡಬೇಕು ಅಂದ್ರೆ ಏನ್ ಮಾಡ್ತಾರೆ? ರೀಲ್ಸ್ ನೋಡ್ತಾರೆ ವೀಡಿಯೋಸ್ ನೋಡ್ತಾರೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ದಲ್ಲಿ ಟೈಮ್ ಕಳೆಯೋ ಜನ ಬುದ್ದಿ ಉಪಯೋಗಿಸಲ್ಲ ಅನ್ನೊ ಆರೋಪ ಇದೆ. ಹಾಗೇ ಸೋಶಿಯಲ್ ಮೀಡಿಯಾ ನೋಡಿ ನೋಡಿ ಬುದ್ದಿ ಕೂಡ ಚೆನ್ನಾಗಿ ಕೆಲಸ ಮಾಡೋದಿಲ್ಲ ಅಂತ ಅನೇಕ ಸಂಶೋಧನೆಗಳು ಕೂಡ ಹೇಳಿವೆ. ಆದರೆ ಈಗ ಈ ಬುದ್ದಿ ಉಪಯೋಗಿಸೋದ್ರಲ್ಲಿ ಆಲಸಿಗಳಾಗಿರೋ ಜನರು ಇನ್ನೊಂದು ರೀತಿ ಬಕ್ರಾಗಳಾಗುತ್ತಿದ್ದಾರೆ. ಹಿಂದೆಲ್ಲ ಏನೇನೋ ಸರ್ಕಸ್ ಗಳನ್ನ ಮಾಡಿ ರೀಲ್ಸ್ ತಯಾರಿಸಿ ಜನರನ್ನ ಆಕರ್ಷಿಸಿ ಲೈಕ್ಸ್ ಪಡೆಯುತ್ತಿದ್ದ ಈ ಇನ್ಸ್ಟಾ ವೀರರು ಈಗ ಬಹಳ ಸುಲಭವಾಗಿ ವಿವೇಚನೆ ಬಳಸದ ಸೋಶಿಯಲ್ ಮೀಡಿಯಾ ಬಳಕೆದಾರರನ್ನು ಆಕರ್ಷಿಸುವ ದಾರಿ ಕಂಡುಕೊಂಡಿದ್ದಾರೆ. ಅದೇ ಈ ಎಐ ವಿಡಿಯೋಗಳು. ಯಾವುದೊ ಸಾಧು ಒಂದು ಬಂಡೆಯನ್ನ ಬೆರಳಿನಲ್ಲೇ ಎತ್ತೋದು. ಇನ್ಯಾವನೋ ಸಮುದ್ರನೇ ತಡೆಯೋದು. ಇನ್ನೊಬ್ಬ ಇನ್ನೇನೋ ಪವಾಡ ಮಾಡೋದು ಮತ್ತು ಅದಕ್ಕೆ ಟೈಟಲ್ ಗಳು ಹೇಗಿವೆ ಅಂದ್ರೆ ‘ನೋಡಿ ನಾಗಾ ಬಾಬಾನ ಶಕ್ತಿ ನೋಡಿ’ ‘ಈ ವ್ಯಕ್ತಿಯ ಅತೀಂದ್ರಿಯ ಪವಾಡ ನೋಡಿ’ ‘ಮಹಾದೇವನ ಪವರ್ ನೋಡಿ’ ಅಂತೆಲ್ಲ. ಅದನ್ನೆಲ್ಲ ನೋಡಿ ಅದು ನಿಜಾನಾ ಇಲ್ಲ ಎಐ ನ ಅಂತ ಒಂದೂ ಯೋಚನೆ ಮಾಡದೆ ‘ಜೈ ದೇವರೇ’ ‘ಜೈ ಮಹಾದೇವ’ ‘ಇದೇ ನೋಡಿ ದೇವರ ಶಕ್ತಿ’ ಅಂತೆಲ್ಲ ಕಮೆಂಟ್ ಮಾಡಿ ಲೈಕ್ಸ್ ಕೊಡೊ ಜನ ತಮ್ಮನ್ನ ಮೂರ್ಖರನ್ನಾಗಿಸಲಾಗಿದೆ ಅಂತ ಒಂದು ಕ್ಷಣವೂ ಯೋಚನೆ ಮಾಡಲ್ಲ.
ಮನುಷ್ಯನ ಗೌರವ ಮತ್ತು ಭಕ್ತಿ ಪಡೆಯಲಿಕ್ಕೆ ದೇವರು ಪವಾಡ ಮಾಡುವ ಅವಶ್ಯಕತೆಯಿಲ್ಲ. ನಿಜವಾದ ಸಾಧುಗಳು ಪವಾಡ ಮಾಡುವುದಿಲ್ಲ ಅವರಿಗೆ ಭಕ್ತರ ಅವಶ್ಯಕತೆಯೂ ಇಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಈ ಬಳಕೆದಾರರು ಇಂಥಾ ಎಐ ವಿಡಿಯೋ ಗಳನ್ನೂ ನೋಡಿ ಬೆಪ್ಪರಾಗುತ್ತಿರುವುದು ಬೇಸರ ತರಿಸುವ ವಿಷಯ. ಹಾಗೇ ಹೆಂಗಸರು ಹುಲಿ ಸಿಂಹದೊಂದಿಗೆ ಹೋರಾಡುವುದು, ಹುಲಿ ಸಿಂಹ ಕಂಡಕಂಡಲ್ಲಿ ದಾಳಿ ಮಾಡುವ ಫೇಕ್ ವಿಡಿಯೊಗಳನ್ನೂ ನೋಡಿ ಒಹ್ ವಾವ್ ಎನ್ನುತ್ತಿರುವ ಇನ್ಸ್ಟಾ ಗ್ರ್ಯಾಂ ವೀಕ್ಷಕರನ್ನ ಆ ಹುಲಿ ಸಿಂಹಗಳೇ ಕಾಪಾಡಬೇಕು ಅನ್ನಿಸುವ ಕಾಲ ಬೇಗ ಬರಬಹುದು.

