ಹುಬ್ಬಳ್ಳಿ : ಮದುವೆ ಅಂದ ಮೇಲೆ ವಧು-ವರ ಇರಬೇಕು ಅದರಲ್ಲೂ ಆರತಕ್ಷತೆ ಎಂದರೇ ಅದೊಂದು ಅದ್ದೂರಿ ಸಮಾರಂಭ.ಬಂಧು,ಬಳಿಗೆ, ಸ್ನೇಹಿತರು ಎಲ್ಲರೂ ಸೇರಿ ಸಂಭ್ರಮಿಸುವ ಸಮಾರಂಭ. ಆದರೆ ಹುಬ್ಬಳ್ಳಿಯಲ್ಲೊಂದು ಮದುವೆ ಆರತಕ್ಷತೆ ಸಮಾರಂಭ ನಡೆದಿದೆ. ಆದರೆ ಅದರಲ್ಲಿ ವಧು ವರರ ಇರಲಿಲ್ಲ.
ಇದೇನು ಆರತಕ್ಷತೆಗೆ ಬರದೆ ವಧು-ವರರು ಪರಾರಿಯಾದರಾ.. ಅಂತ ಕೇಳಬೇಡಿ ಇದಕ್ಕೆ ಕಾರಣ ಇಂಡಿಗೋ ವಿಮಾನ.
ಇನ್ನು ಈ ಆರತಕ್ಷತೆ ಸಮಾರಂಭದಲ್ಲಿ ಮಗಳು-ಅಳಿಯನ ಬದಲು ವಧುವಿನ ತಂದೆ-ತಾಯಿಯೇ ಕುಳಿತು ಬಂಧು ಬಾಂಧವರಿಂದ ಉಡುಗೊರೆ ಸ್ವೀಕರಿಸಿ ಆನ್‌ಲೈನ್‌ನಲ್ಲಿ ಆರತಕ್ಷತೆ ಸಂಪ್ರದಾಯ, ಶಾಸ್ತ್ರ ಮುಗಿಸಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿರುವ ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಹಾಗೂ ಭುವನೇಶ್ವರದ ಸಂಗಮ ದಾಸ್, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಕೆಲಸದ ಸ್ಥಳದಲ್ಲಿ ಪ್ರೀತಿಯ ಬಲೆಗೆ ಬಿದ್ದಿದ್ದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದವರು ಇವರಿಬ್ಬರ ಪ್ರೀತಿಗೆ ಒಪ್ಪಿ ಮದುವೆ ಭುವನೇಶ್ವರ ಆರತಕ್ಷತೆ ಹುಬ್ಬಳ್ಳಿ ಎಂದು ನಿಗದಿ ಮಾಡಿದ್ದರು ಅದರಂತೆ ಇಬ್ಬರ ಮದುವೆಯನ್ನು ಭುವನೇಶ್ವರದಲ್ಲಿ ನವೆಂಬರ್ 23 ರಂದು ನೆರವೇರಿಸಿದ್ದರು.
ವಧುವಿನ ತವರು ಹುಬ್ಬಳ್ಳಿಯಲ್ಲಿ ಡಿಸೆಂಬರ್ 3ರಂದು ಆರತಕ್ಷತೆ ಆಯೋಜಿಸಿದ್ದರು. ಇದಕ್ಕಾಗಿ ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವಧು ಹಾಗೂ ವರನ ಸಂಬಂಧಿಕರೂ ಬಂದಿದ್ದರು. ವಧು-ವರರು ಹಾಗೂ ವರನ ಪೋಷಕರು ಮತ್ತು ಸಂಬಂಧಿಕರು ಭುವನೇಶ್ವರದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಹುಬ್ಬಳ್ಳಿಗೆ ಆಗಮಿಸಲು ಡಿಸೆಂಬರ್ 2ಕ್ಕೆ ವಿಮಾನ ಬುಕ್ ಮಾಡಿದ್ದರು.
ಈ ನಡುವೆ ಇವರು ಟಿಕೆಟ್ ಬುಕ್ ಮಾಡಿದ್ದ ಇಂಡಿಗೋ ವಿಮಾನ ಸಿಬ್ಬಂದಿ ಇವರಿಗೆ ಕರೆ ಮಾಡಿ ಡಿಸೆಂಬರ್ 2ರ ಬೆಳಗ್ಗೆ 9ರಿಂದ ಮರುದಿನ ಅಂದರೆ ಡಿಸೆಂಬರ್ 3 ಬೆಳಗಿನ ಜಾವ 4 ಗಂಟೆವರೆಗೂ ವಿಮಾನ ವಿಳಂಬವಾಗುತ್ತಿದೆ ಎಂದು ಹೇಳಿಕೊಂಡೇ ಬಂದಿದ್ದರು.
ಇವರು ಕೂಡ ಇನ್ನೇನು ಕೆಲವೇ ಹೊತ್ತಿನಲ್ಲಿ ವಿಮಾನ ಬರಬಹುದು ಎಂದು ಕಾಯುತ್ತಾ ಕುಳಿತಿದ್ದರು ಆದರೆ
ಇಂಡಿಗೋ ಸಿಬ್ಬಂದಿ, ಡಿಸೆಂಬರ್ 3ರ ಬೆಳಗ್ಗೆ ಎಂಟು ಗಂಟೆಗೆ ಕರೆ ಮಾಡಿ ನೀವು ಪ್ರಯಾಣ ಮಾಡಬೇಕಾಗಿದ್ದ ವಿಮಾನ ತಾಂತ್ರಿಕ ಕಾರಣಗಳಿಂದ ರದ್ದಾಗಿದೆ ಎಂದಿದ್ದರು.
ಹೀಗಾಗಿ ಇವರೆಲ್ಲ ಬೆಂಗಳೂರಿಗೆ ಬರಲು ಯಾವುದೇ ಅನ್ಯ ಮಾರ್ಗ ತಿಳಿಯದೆ ವಧು-ವರ, ಪಾಲಕರೆಲ್ಲರೂ ಭುವನೇಶ್ವರದಲ್ಲಿಯೇ ಉಳಿದರು. ಇತ್ತ ಹುಬ್ಬಳ್ಳಿಯಲ್ಲಿ ವಧುವಿನ ತಂದೆ-ತಾಯಿ, ಸಂಬಂಧಿಕರು ಅವರಿಗಾಗಿ ಕಾಯುತ್ತಿದ್ದರು. ಈ ಮಧ್ಯೆ, ಕಲ್ಯಾಣ ಮಂಟಪ ಬುಕ್ ಆಗಿತ್ತು. ಜತೆಗೆ, ಎಲ್ಲ ತಯಾರಿಗಳೂ ಮುಗಿದಿದ್ದವು. ಸಾಕಷ್ಟು ಜನ ಸಂಬಂಧಿಕರು ಬಂದಿದ್ದರು
ಕೊನೆಗೆ ಏನು ಮಾಡಬೇಕು ಎಂಬುದು ತಿಳಿಯದೆ, ಹುಬ್ಬಳ್ಳಿಯಲ್ಲಿ ವಧುವಿನ ತಂದೆ-ತಾಯಿಯೇ ವಧು-ವರರ ಕುರ್ಚಿಯಲ್ಲಿ ಕುಳಿತು, ಶಾಸ್ತ್ರ ಮುಗಿಸಿದರು. ಅತ್ತ ವಧು-ವರ, ತಾವೂ ತಯಾರಾಗಿ ಭುವನೇಶ್ವರದಲ್ಲಿ ಕುಳಿತರು. ಮುಹೂರ್ತಕ್ಕೆ ಸರಿಯಾಗಿ ಆನ್‌ಲೈನ್ ಮೂಲಕವೇ ಆರತಕ್ಷತೆ ಮುಗಿಸಿದರು.
ಬಂದ ಸಂಬಂಧಿಕರು ವರ್ಚುವಲ್ ಮೂಲಕವೇ ವಧು-ವರರನ್ನು ಕಂಡು ಆಶೀರ್ವಾದ ಮಾಡಿ, ತಂದೆ-ತಾಯಿಗೆ ಗಿಫ್ಟ್ ಕೊಟ್ಟರು. ಅತ್ತ ವಧು-ವರ ಕೂಡ ಆನ್‌ಲೈನ್ ಮೂಲಕವೇ ಹುಬ್ಬಳ್ಳಿಯಲ್ಲಿ ಪಾಲ್ಗೊಂಡ ಸಂಬಂಧಿಕರಿಂದ ಆಶೀರ್ವಾದ ಪಡೆದರು.
Previous Articleಇಂಡಿಗೋ ವಿಮಾನಯಾನ ರದ್ದು-ಪ್ರಯಾಣಿಕರ ಪರದಾಟ
Next Article ದರ್ಶನ್‌ಗೆ ದುಡ್ಡು ಎಲ್ಲಿಂದ ಬಂತು?

