ಅಮೂಲ್‌ಗೆ ಠಕ್ಕರ್ ಕೊಡಲು ಕೆಎಂಎಫ್ ಪ್ಲ್ಯಾನ್
ಬೆಂಗಳೂರು:
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಜನಪ್ರಿಯತೆಯನ್ನು ಬಳಸಿಕೊಂಡು ಕರ್ನಾಟಕದ ಹೆಮ್ಮೆಯ ಡೈರಿ ಬ್ರ್ಯಾಂಡ್ ‘ನಂದಿನಿ’ಯನ್ನು ರಾಷ್ಟ್ರಮಟ್ಟದಲ್ಲಿ ಬಲಪಡಿಸಲು ಕರ್ನಾಟಕ ಹಾಲು ಮಹಾಮಂಡಳಿ (KMF) ಮುಂದಾಗಿದೆ.
2026ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪ್ರಾಯೋಜಕತ್ವ ಪಡೆಯಲು ಕೆಎಂಎಫ್ ಟೆಂಡರ್ ಆಹ್ವಾನಿಸಿದೆ. ಕಳೆದ ಸೀಸನ್‌ನಲ್ಲಿ ಅಮೂಲ್ ಪ್ರಾಯೋಜಕತ್ವ ಪಡೆದಿದ್ದು ಕನ್ನಡಿಗರ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ನಂದಿನಿ, ಆ ಸ್ಥಾನವನ್ನು ಭರ್ತಿ ಮಾಡಿ ಅಮೂಲ್‌ಗೆ ನೇರ ಪೈಪೋಟಿ ನೀಡಲು ಸಜ್ಜಾಗಿದೆ.
ಪ್ರಾಯೋಜಕತ್ವ ಒಪ್ಪಂದದಲ್ಲಿ ನಂದಿನಿ ಲೋಗೋ ಬಳಕೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ಪನ್ನ ಮಾರಾಟ, ಡಿಜಿಟಲ್ ಹಾಗೂ ಹೊರಾಂಗಣ ಜಾಹೀರಾತುಗಳ ಹಕ್ಕುಗಳು ಇರಲಿವೆ.
ಐಪಿಎಲ್ 2026 ಟೂರ್ನಿ ಮಾರ್ಚ್ 26ರಿಂದ ಮೇ 31ರವರೆಗೆ ನಡೆಯಲಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೆ ಈ ಬಾರಿ ಆರ್‌ಸಿಬಿ ಜೊತೆ ‘ನಂದಿನಿ’ ಬ್ರ್ಯಾಂಡ್ ರಾರಾಜಿಸುವ ಸಾಧ್ಯತೆ ಇದೆ.

