ಈ ಸಲದ ಕನ್ನಡ ಬಿಗ್ ಬಾಸ್ ಫಿನಾಲೆ ಸುದ್ದಿಗಳು ದೇಶವೊಂದರ ಅಧ್ಯಕ್ಷರ ಚುನಾವಣೆಯೇನೋ ಅನ್ನೋ ಮಟ್ಟಿಗೆ ಚರ್ಚೆ ಆಗ್ತಾ ಇದೆ. ಆಫ್ಟರ್ ಆಲ್ ಒಂದು ಟಿವಿ ಕಾರ್ಯಕ್ರಮದಲ್ಲಿ ಅಂತಿಮವಾಗಿ ಯಾರು ಗೆಲ್ತಾರೆ ಅನ್ನೋದು ಟಿವಿಗೆ ಸೀಮಿತವಾಗಿದ್ದರೆ ಸಾಕಿತ್ತು. ಅದು ಬಿಟ್ಟು ಇದು ಯಾವ ಲೆವೆಲ್ ಗೆ ಜಾತಿ, ಸಂಘಟನೆಗಳವರೆಗೂ ತಲುಪಿದೆ ಎಂದರೆ ಬಿಗ್ ಬಾಸ್ ಫಿನಾಲೆ ಮುಗಿದಾಗ ಯುದ್ಧವೇ ಸಂಭವಿಸಬಹುದೇನೋ ಎನ್ನುವ ಭ್ರಮೆಯನ್ನು ನಿರ್ಮಿಸಲಾಗಿದೆ. ಅಂತಿಮ ಸುತ್ತಿನ ಆರು ಸ್ಪರ್ಧಿಗಳಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಮಧ್ಯೆ ಹಣಾಹಣಿ ಸ್ಪರ್ಧೆ ಇದೆ ಎನ್ನಲಾಗಿದೆ. ಇಷ್ಟೇ ಇದ್ದರೆ ಪರವಾಗಿರಲಿಲ್ಲ. ಗಿಲ್ಲಿನಟ ಹಾಲುಮತಸ್ಥ ಜನಾಂಗಕ್ಕೆ ಸೇರಿದವರು ಅನ್ನೋ ಕಾರಣಕ್ಕೆ, ಆ ಜನಾಂಗದ ಜನರೆಲ್ಲ ತಮ್ಮವ ಗೆಲ್ಲಲೇಬೇಕು ಎಂದು ಪಣತೊಟ್ಟು ವೋಟ್ ಹಾಕ್ತಿದ್ದಾರೆ ಅಂತ ಜನರು ಮಾತಾಡಿಕೊಳ್ತಿದಾರೆ. ಇತ್ತ ಅಶ್ವಿನಿ ಗೌಡ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಸಕ್ರಿಯವಾಗಿದ್ದೋರು. ಆ ಕಾರಣಕ್ಕೆ ನಾರಾಯಣ ಗೌಡ ಬಣದ ಕರವೇ ಕಾರ್ಯಕರ್ತರು ಅಶ್ವಿನಿ ಗೆಲುವಿಗೆ ಟೊಂಕಕಟ್ಟಿ ನಿಂತು ಪ್ರಚಾರ ಮಾಡುತ್ತಿದ್ದಾರೆ ಅಂತ ಟ್ರೋಲ್ ಆಗ್ತಿದೆ. ಇವರಿಗೆಲ್ಲ ತಾವೇನು ಮಾಡುತ್ತಿದ್ದೇವೆ, ಈ ಕಾರ್ಯಕ್ರಮದಲ್ಲಿ ಗೆದ್ದವರಿಂದ ಸಮಾಜಕ್ಕೆ ಏನಾದರೂ ಒಳಿತಾಗುತ್ತಾ ಅಂತ ಯೋಚಿಸೋ ಕನಿಷ್ಟ ಪರಿಜ್ಞಾನವೂ ಇಲ್ಲ ಅನ್ನೋದು ದುರಂತ. ಅಸಲಿಗೆ ಬಿಗ್ ಬಾಸ್ ವಿನ್ನರ್ ಗಳಿಂದ ಸಮಾಜಕ್ಕೆ ಏನೂ ಉಪಯೋಗವಿಲ್ಲ. ಇನ್ನು ಬಿಗ್ ಬಾಸ್ ಸ್ಪರ್ಧಿಗಳು ಆಚೆ ಬಂದಮೇಲೆ ಅಕ್ಷರಶಃ ನಿರುದ್ಯೋಗಿಗಳಾಗುತ್ತಾರೆ. ಅವರಿಗೆ ಹೇಳಿಕೊಳ್ಳುವಂಥ ದೊಡ್ಡ ಅವಕಾಶ ಬಂದಿರುವ ಉದಾಹರಣೆಗಳೇ ಇಲ್ಲ. ಒಟ್ಟಿನಲ್ಲಿ ಖೇಲ್ ಖತಂ ಆದಮೇಲೆ ನಾಟಕ್ ಬಂದ್ ಆಗಬೇಕಿರುವಂಥ ವಿಷಯ ಬಿಗ್ ಬಾಸ್. ಆದರೆ ಈ ಸಲ ಅಸಹ್ಯ ಎನ್ನುವಷ್ಟು ಅತಿರೇಕಕ್ಕೆ ಹೋಗಿದೆ. ಇದನ್ನ ಹೀಗೇ ಬಿಟ್ಟರೆ ಮುಂದಿನ ಸಲ ರಕ್ತಪಾತವಾಗುವುದಿಲ್ಲ ಎಂಬ ಗ್ಯಾರೆಂಟಿ ಏನು? ಇದಕ್ಕೆ ಟಿವಿ ಚಾನೆಲ್ ಹೊಣೆಯಾಗುತ್ತಾ? ಇಂಥ ಚಿಲ್ಲರೆ ಆಟಗಳನ್ನೆಲ್ಲ ನೋಡುತ್ತ ಕೂತ ಸರಕಾರ ಹೊಣೆ ಆಗುತ್ತಾ? ನೀವೇ ಹೇಳಿ.

