ಬೆಂಗಳೂರು,
ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಇದೀಗ ರಾಜ್ಯ ಸರ್ಕಾರದ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೈಗೊಂಡ ಕಾಮಗಾರಿಗಳ ಬಿಲ್ ಗಳ ಬಾಕಿ ಮೊತ್ತವನ್ನು ಮಾ.5ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಲು ರಾಜ್ಯ ಗುತ್ತಿಗೆದಾರರ ಸಂಘ ತೀರ್ಮಾನಿಸಿದೆ.
ಗುತ್ತಿಗೆದಾರರು ಬಾಕಿ ಇರುವ 38 ಸಾವಿರ ಕೋಟಿ ಬಾಕಿ ಬಿಲ್ ಮೊತ್ತವನ್ನು ನಿಗದಿತ ಸಮಯದೊಳಗೆ ಪಾವತಿ ಮಾಡಬೇಕು.ತಪ್ಪಿದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆಯಲಾಗುವುದು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಕಳೆದ ಎರಡುವರೆ ವರ್ಷದಿಂದ ಸರ್ಕಾರ ಬಾಕಿ ಬಿಲ್ ಹಣ ಪಾವತಿಗೆ ಹಿಂದೇಟು ಹಾಕುತ್ತಿದೆ. ರಾಜ್ಯ ಗುತ್ತಿಗೆದಾರರಿಗೆ ಸುಮಾರು 38 ಸಾವಿರ ಕೋಟಿ ಬಾಕಿ ಹಣ ಉಳಿಸಿಕೊಂಡಿದೆ. ಇತ್ತ ಜಿಬಿಎ ವ್ಯಾಪ್ತಿಯ ಗುತ್ತಿಗೆದಾರರಿಗೆ ಸುಮಾರು 2.900 ಕೋಟಿ ಬಾಕಿ ಹಣ ಉಳಿಸಿಕೊಂಡಿದೆ. ಈಗಾಗಲೇ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಕೂಡ ಬಾಕಿ ಹಣ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಕರ್ನಾಟಕ ರಾಜ್ಯ ಗುತ್ತಿಗೆದಾರರ ಹಲವಾರು ಸಮಸ್ಯೆಗಳು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಮತ್ತು ಹಲವಾರು ಸಚಿವರನ್ನು ಭೇಟಿ ಮಾಡಿ, ಅವರ ಗಮನಕ್ಕೆ ತಂದಿದ್ದೇವೆ. ಆದರೆ ಇದುವರೆವಿಗೂ ಲೋಕೋಪಯೋಗಿ ಇಲಾಖೆ, ಬಿ.ಬಿ.ಎಂ.ಪಿ. ಮತ್ತು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಹೊರತುಪಡಿಸಿ ಬೇರೆ ಇಲಾಖೆಗಳಲ್ಲೂ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಸರ್ಕಾರ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಮುಖ್ಯಮಂತ್ರಿಗಳು ಹಲವಾರು ಬಾರಿ ಸಂಘದ ಪದಾಧಿಕಾರಿಗಳ ಜೊತೆಗೆ ಸಭೆ ನಿಗದಿಪಡಿಸಿ ಯಾವುದೇ ಸ್ಪಷ್ಟ ಕಾರಣ ನೀಡದೆ ಮುಂದೂಡಿದ್ದಾರೆ. ಇದುವರೆಗೂ ಅಧಿಕೃತವಾಗಿ ಸಭೆ ಕರೆದು ಚರ್ಚೆ ನಡೆಸಲು ಸಿಎಂ ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆ ಮತ್ತು ಬಿಬಿಎಂಪಿ ಹೊರತು ಪಡಿಸಿ ಬೇರೆ ಯಾವುದೇ ಇಲಾಖೆಯಲ್ಲಿ ಜೇಷ್ಠತೆಯನ್ನು ಪಾಲಿಸುತ್ತಿಲ್ಲ. ಉಪಮುಖ್ಯಮಂತ್ರಿ ಹಾಗೂ ಇಲಾಖೆಗಳ ಸಚಿವರನ್ನೂ ಎರಡೂರು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಗುತ್ತಿಗೆದಾರರ ಸಂಕಷ್ಟಗಳನ್ನು ಬಗೆ ಹರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಜಿಎಸ್‌ಟಿ ಶೇ.12 ವ್ಯತ್ಯಾಸದ ಮೊತ್ತವನ್ನು ಸರ್ಕಾರವೇ ಭರಿಸಲು ತೀರ್ಮಾನ ಕೈಗೊಂಡಿತ್ತು. ಆದರೆ ಇದುವರೆಗೆ ಆರ್ಥಿಕ ಇಲಾಖೆ ಆದೇಶ ಮಾಡಿಲ್ಲ ಎಂದು ದೂರಿದರು.
ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ಮತ್ತು ಮಹಾರಾಷ್ಟ್ರಗಳಲ್ಲಿ ಸುಮಾರು 5 ವರ್ಷಗಳ ಹಿಂದೆಯೇ ಜಾರಿಗೆ ಬಂದಿದೆ. ನಗಾರಭಿವೃದ್ಧಿ ಇಲಾಖೆಯಲ್ಲಿ ಮಧ್ಯವರ್ತಿಗಳದೇ ದರ್ಬಾರ್. ಟೆಂಡರ್ ಅನುಮೋದನೆಗೆ, ಟೆಂಡರ್ ಹಿಂಪಡೆಯಲು ಧಮ್ಕಿ ಹಾಕುತ್ತಿದ್ದಾರೆ ಎಂದರು.
ಕಳೆದ ಸರ್ಕಾರಗಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ. ರಾಜ್ಯದ ಎಲ್ಲಾ ಇಲಾಖೆಯಲ್ಲೂ ಕಮಿಷನ್ ಪಡೆದು ಬಾಕಿ ಬಿಲ್ ಪಾವತಿಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುತ್ತಿಗೆದಾರರ ಮುನೇಗೌಡ ಆತಹತ್ಯೆಗೆ ಮುಂದಾಗಿದ್ದರು. ಅವರಿಗೆ 25 ಲಕ್ಷ ರೂ. ಬಾಕಿ ಬಿಲ್ ಹಣ ಪಾವತಿ ಅಗಬೇಕಿತ್ತು. ಇದುವರೆಗೆ ಪಾವತಿಯಾಗಿಲ್ಲ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ ಬಿಲ್ ಹಣ ಕೇಳೋದಕ್ಕೆ ಹೋದರೆ ಹಿಂದಿನ ಸರ್ಕಾರ ಮಾಡಿದ್ದು ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂಬಂಧ ಮುಖ್ಯಮಂತ್ರಿಗಳು ಗುತ್ತಿಗೆದಾರರ ಶೀಘ್ರ ಸಭೆ ಕರೆದು ಬಾಕಿ ಇರುವ ಬಿಲ್‌ಗಳನ್ನು ಪಾವತಿ ಮಾಡುವಂತೆ ಅವರು ಒತ್ತಾಯಿಸಿದರು.
ಸಂಘದ ಗೌರವ ಅಧ್ಯಕ್ಷ ಜಗನ್ನಾಥ ಶೇಗಜಿ ಮಾತನಾಡಿ, ಕಲ್ಯಾಣ ಕರ್ನಾಟಕದ ಭಾಗದಲ್ಲಿ 5 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಅದರೆ ಇದುವರೆಗೆ ಒಂದೇ ಒಂದು ಟೆಂಡರ್ ಕರೆದಿಲ್ಲ.ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಅಗಿದೆ..ಕಲ್ಯಾಣ ಕರ್ನಾಟಕದ ಶೇ.70ರಷ್ಟು ಶಾಸಕರಿಂದ ಅಭಿವೃದ್ಧಿ ಕಾಮಗಾರಿ ಗಳಿಗೆ ಅನ್ಯಾಯ ಮಾಡಿದ್ದಾರೆ. ಯಾವುದೇ ಟೆಂಡರ್ ಕರೆಯದೆ ದ್ರೋಹ ಬಗೆದಿದ್ದಾರೆ ಎಂದರು.

