ಬೆಂಗಳೂರು,
ಅಧಿಕಾರ ಹಸ್ತಾಂತರ ವಿಚಾರವಾಗಿ ರಾಜ್ಯ ಕಾಂಗ್ರೆಸ್ಸಿನಲ್ಲಿ ತೆರೆಮರೆಯಲ್ಲಿಯೇ ವಿದ್ಯಮಾನಗಳು ನಡೆಯುತ್ತಿದ್ದರೂ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ ಬಜೆಟ್ ಮಂಡನೆಗೆ ಸಿದ್ಧತೆ ಆರಂಭಿಸಿದ್ದಾರೆ.
ವಿಧಾನಮಂಡಲದ ವರ್ಷದ ಮೊದಲ ಅಧಿವೇಶನ ಮುಗಿಯುತ್ತಿದ್ದಂತೆಯೇ ಬಜೆಟ್ ಸಿದ್ಧತೆ ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ವಿಧಾನಸಭೆಯಲ್ಲಿ ಬರುವ ಮಾರ್ಚ್ 6 ರಂದು ತಮ್ಮ ಕನಸಿನ ಬಜೆಟ್ ಮಂಡಿಸಲು ನಿರ್ಧರಿಸಿದ್ದಾರೆ.
ರಾಜ್ಯದ ಮಟ್ಟಿಗೆ ಸಿದ್ದರಾಮಯ್ಯ ಈ ಮೂಲಕ ಅತಿ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗುತ್ತಿದ್ದಾರೆ ಈ ದಾಖಲೆಯ 4.30 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಲಿದ್ದಾರೆ.
ಈ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಕೆಲವು ಹೊಸ ಯೋಜನೆಗಳನ್ನು ಪ್ರಕಟಿಸಲು ತಯಾರಿ ನಡೆಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿರುವ ತೆರಿಗೆ ಪಾಲಿನಲ್ಲಿ ಕಡಿತ ಮಾಡಿರುವುದು ಜಿಎಸ್ಟಿ ಪದ್ಧತಿಯಲ್ಲಿ ಮಾರ್ಪಾಡು ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬರುತ್ತಿರುವ ಆದಾಯ ದೊಡ್ಡ ಪ್ರಮಾಣದಲ್ಲಿ ಖೋತಾ ಆಗಿದೆ ಇದರ ಜೊತೆಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರದ್ದುಪಡಿಸಿ ಹೊಸದಾಗಿ ಜಾರಿಗೆ ತಂದಿರುವ ವಿಬಿಜಿ ರಾಮ್ ಜಿ ಯೋಜನೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹಣಕ್ಕೆ ಎದುರಾಗಿ ಶೇಕಡ 40ರಷ್ಟು ಸಂಪನ್ಮೂಲ ತೆಗೆದಿರಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಸಂಪನ್ಮೂಲ ಕ್ರೂಡೀಕರಣಕ್ಕೆ ಹೊಸ ಮಾರ್ಗಗಳ ಹುಡುಕಾಟ ಆರಂಭಿಸಿದ್ದಾರೆ.
ಪ್ರಮುಖವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ಅದನ್ನು ಹರಾಜು ಮಾಡುವ ಮೂಲಕ ದೊಡ್ಡ ಪ್ರಮಾಣದ ಸಂಪನ್ಮೂಲ ಸಂಗ್ರಹಿಸಲು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮುದ್ರಾಂಕ ಮತ್ತು ನೋಂದಣಿ, ಅಬಕಾರಿ ಹಾಗೂ ಸಾರಿಗೆ ವಲಯದಲ್ಲಿ ಈ ಬಾರಿ ನೀರಿಕ್ಷೆಯಷ್ಟು ಸಂಪನ್ಮೂಲ ಕ್ರೂಡೀಕರಿಸಲು ಸಾಧ್ಯವಾಗಿಲ್ಲ ಎಂಬ ವರದಿ ಪಡೆದುಕೊಂಡಿರುವ ಅವರು ಮುಂದಿನ ಆರ್ಥಿಕ ವರ್ಷದಲ್ಲಿ ಈ 3 ವಲಯದಲ್ಲಿ ಹೆಚ್ಚಿನ ಪ್ರಮಾಣದ ತೆರಿಗೆ ಸಂಗ್ರಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ.
ಬಜೆಟ್ ತಯಾರಿಗೆ ಸಿದ್ಧತೆ ಆರಂಭಿಸಿರುವ ಅವರು ಈಗಾಗಲೇ ಪ್ರವಾಸೋದ್ಯಮ, ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ, ಕಾರ್ಮಿಕ ಇಲಾಖೆ ಒಳಾಡಳಿತ, ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಗಳ ಕಲ್ಯಾಣ, ಉನ್ನತ ಶಿಕ್ಷಣ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು
Previous Articleಮೆಟ್ರೋ ಪ್ರಯಾಣ ದರ ಇನ್ನಷ್ಟು ದುಬಾರಿ
Next Article ಅಮಿತ್ ಶಾ ಅವರ ಆ ನುಡಿಗಾಗಿ ಕಾಯುತ್ತಿರುವ ವಿಜಯೇಂದ್ರ

