ಬೆಂಗಳೂರು,
ಹೊಡಿ ಬಡಿ ಆಟವೆಂದೆ ಜನಪ್ರಿಯತೆ ಪಡೆದಿರುವ ಟಿ ಟ್ವೆಂಟಿ ಕ್ರಿಕೆಟ್ ಜಗತ್ತಿನ ಎಲ್ಲಾ ಕ್ರೀಡಾಸಕ್ತರ ಗಮನ ಸೆಳೆದಿದೆ. ಅದರಲ್ಲೂ ಭಾರತದಲ್ಲಿ ಪ್ರತಿ ವರ್ಷ ಆಯೋಜಿಸಲಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾಕೂಟ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಇನ್ನು ಐಪಿಎಲ್ ನಲ್ಲಿರುವ ತಂಡಗಳ ಪೈಕಿ ಅತಿಹೆಚ್ಚು ಅಭಿಮಾನಿಗಳು ಇರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡಕ್ಕೆ.
ಅದೇ ರೀತಿ ಬ್ರಾಂಡ್ ವ್ಯಾಲ್ಯೂ ಜಾಸ್ತಿ ಇರುವುದೂ ಇದೇ ತಂಡಕ್ಕೆ. ತಂಡ ಎಷ್ಟೇ ಟೂರ್ನಿಯಲ್ಲಿ ಸೋತರೂ, ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ತಂಡವನ್ನು ಬಿಟ್ಟು ಕೊಡುವುದಿಲ್ಲ.
ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಈ ಪ್ರಾಂಚೈಸಿ ಈಗ ಬೇರೆಯವರ ಪಾಲಾಗಲಿದೆ.
ಆರ್ ಸಿ ಬಿ ಕಪ್ ಗೆದ್ದ ನಂತರವಂತೂ ಈ ತಂಡದ ಒಡೆತನ ಹೊಂದಲು ಅನೇಕ ಉದ್ಯಮಿಗಳು ಮುಗಿ ಬೀಳುತ್ತಿದ್ದಾರೆ
ಅದರಲ್ಲೂ ಇದೀಗ ಇಂಗ್ಲಿಷ್ ಪುಟ್ ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಈ ಪ್ರಾಂಚೈಸಿ ಖರೀದಿಸಲು ಬಯಸಿದೆ ಮ್ಯಾಂಚೆಸ್ಟರ್ ತಂಡದ ಸಹ ಮಾಲೀಕ ಅವ್ರಾಮ್ ಗ್ಲೇಜರ್ ಆಕರ್ಷಕ ಬಿಡ್ ನೊಂದಿಗೆ ಆಖಾಡಕ್ಕೆ ಇಳಿದಿದ್ದಾರೆ.
ಬಿಡ್ ನಲ್ಲಿ ಈಗಾಗಲೇ ನಾಲ್ವರು ಘಟಾನುಗಟಿಗಳು ಇದ್ದಾರೆ. ಈಗ, 1.8 ಬಿಲಿಯನ್ ಡಾಲರ್ ಮೊತ್ತವನ್ನು ಗ್ಲೇಜರ್ ಬಿಡ್ ನಲ್ಲಿ ಆಫರ್ ನೀಡಿದ್ದಾರೆ.
ಆರ್ ಸಿ ಬಿ ಖರೀದಿಸಲು ಮಂಚೂಣಿಯಲ್ಲಿರುವ ಇನ್ನೊಂದು ಕಂಪೆನಿ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್. ಈಗಾಗಲೇ, ಗುಜರಾತ್ ಜೈಂಟ್ಸ್ ಅನ್ನು ಖರೀದಿಸಿರುವ ಅದಾನಿ ಗ್ರೂಪ್, ಬೆಂಗಳೂರು ತಂಡಕ್ಕಿರುವ ಅಪಾರ ಫ್ಯಾನ್ ಬೇಸ್ ಅನ್ನು ನೋಡಿ, ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಬಿನ ಬಿಡ್’ಗಿಂತಲೂ ಹೆಚ್ಚು ಮೊತ್ತವನ್ನು ನೀಡಲು ಸಿದ್ದವಿದೆ ಎಂದು ಹೇಳಲಾಗುತ್ತಿದೆ.
ಇವರಲ್ಲದೆ, ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್’ಮೆಂಟ್ ಫಂಡ್ ,ಜಿಂದಾಲ್ ಸೌತ್ ವೆಸ್ಟ್ ಮತ್ತು ಟಾಟಾ ಗ್ರೂಪ್ ಅಥವಾ ಸಿವಿಸಿ ಕ್ಯಾಪಿಟಲ್ ಈ ಪ್ರಾಂಚೈಸಿ ಖರೀದಿಸಲು ಆಸಕ್ತಿ ಹೊಂದಿದ್ದು, ಈ ತಂಡ ಯಾರ ಪಾಲಾಗಲಿದೆ ಎನ್ನುವುದು ಕುತೂಹಲದ ಸಂಗತಿಯಾಗಿದೆ.

