ಬೆಂಗಳೂರು,
ಇತ್ತೀಚೆಗೆ ಯಾವುದಾವುದೋ ಕಾರಣಗಳಿಗಾಗಿ ಕೊಲೆಯಂತಹ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆಯುತ್ತಿವೆ ಇದರ ಸಾಲಿಗೆ ಈಗ ಕೆಮ್ಮಿದ ಕಾರಣಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ.
ತನ್ನ ಪಕ್ಕದ ಮನೆಯಲ್ಲಿ ನೆಲೆಸಿದ್ದ ವ್ಯಕ್ತಿ ಜೋರಾಗಿ ಕೆಮ್ಮಿದ ಕಾರಣಕ್ಕಾಗಿ ಆತನ ನೆರೆಮನೆಯ ನಿವಾಸಿ ಕೆಮ್ಮಿದ ವ್ಯಕ್ತಿಯನ್ನು ಹಿಡಿದು ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಈ ಘಟನೆ ಬೆಂಗಳೂರು ಹೊರವಲಯದ ಬಿಡದಿ ಹೋಬಳಿಯ ವಾಜರಹಳ್ಳಿಯಲ್ಲಿ ನಡೆದಿದೆ. ಜೋರಾಗಿ ಕೆಮ್ಮಿ ಕೊಲೆಯಾದ ವ್ಯಕ್ತಿಯನ್ನುರಾಜಸ್ಥಾನ ಮೂಲದ ವಿನೋದ್ ಕುಮಾರ್ ಜೈನ್ (33) ಎಂದು ಗುರುತಿಸಲಾಗಿದೆ.
ಬಿಡದಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವಿನೋದ್ ಕುಮಾರ್ ಜೈನ್ ವಾಜರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದನು.
ನಿನ್ನೆ ರಾತ್ರಿ ವಿನೋದ್ ಮನೆಯಲ್ಲಿ ಜೋರಾಗಿ ಕೆಮ್ಮುತ್ತಿದ್ದರು ಎನ್ನಲಾಗಿದ್ದು, ಇದೇ ವಿಚಾರಕ್ಕೆ ಪಕ್ಕದ ಮನೆಯ ಹೊಂಬಯ್ಯ ಎಂಬಾತನಿಗೆ ಕಿರಿಕಿರಿ ಉಂಟಾಗಿ ಕೋಪಗೊಂಡಿದ್ದಾನೆ.
ಪದೇ ಪದೇ ಜೋರಾಗಿ ಕೆಮ್ಮಿ ನಮಗೆ ತೊಂದರೆ ಕೊಡುತ್ತೀಯಾ? ಎಂದು ಕಿರಿಕ್ ತೆಗೆದ ಆರೋಪಿ ಹೊಂಬಯ್ಯ ಹಾಗೂ ಆತನ ಕುಟುಂಬಸ್ಥರು ವಿನೋದ್ ಮೇಲೆ ಏಕಾಏಕಿ ಮುಗಿಬಿದ್ದಿದ್ದಾರೆ.
ಒಂಟಿಯಾಗಿದ್ದ ವಿನೋದ್‌ನನ್ನು ಅಟ್ಟಾಡಿಸಿ, ಮನಸೋ ಇಚ್ಛೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿನೋದ್‌ನನ್ನು ತಕ್ಷಣವೇ ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿನೋದ್ ಕುಮಾರ್ ಜೈನ್, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಹಲ್ಲೆ ಮಾಡಿದ ಹೊಂಬಯ್ಯ ಮತ್ತು ಆತನ ಮನೆಯವರು ತಲೆಮರೆಸಿಕೊಂಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಬಿಡದಿ ಪೊಲೀಸರು ಆರೋಪಿ ಹೊಂಬಯ್ಯ ಮತ್ತು ಆತನ ಕುಟುಂಬಸ್ಥರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Previous Articleಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ
Next Article ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

