ಬೆಂಗಳೂರು,
ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬ ಪೆರೋಲ್ ಮೇಲೆ ಬಿಡುಗಡೆಯಾಗಿ ಪೊಲೀಸ್ ಸಮವಸ್ತ್ರ ಧರಿಸಿ ತನ್ನ ತಂಡದೊಂದಿಗೆ ಮನೆಯೊಂದಕ್ಕೆ ನುಗ್ಗಿ ದರೋಡೆ ನಡೆಸಿ ಪರಾರಿಯಾಗಿದ್ದಾನೆ.
ಈ ಪ್ರಕರಣವನ್ನು ಭೇದಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.ಆದರೆ ಇದೊಂದು ಯೋಜಿತ ಕೃತ್ಯವಾಗಿದ್ದು ಇದರ ಹಿಂದೆ ಇರುವ ಅಜ್ಞಾತ ವ್ಯಕ್ತಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ
ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿರುವ
ರಿಯಲ್ ಎಸ್ಟೇಟ್ ಉದ್ಯಮಿ ಹೊಂಬಾಳೆಗೌಡ ಎಂಬುವವರ ಮನೆಗೆ ಪೊಲೀಸ್ ಸಮವಸ್ತ್ರದಲ್ಲಿ ಬಂದಿದ್ದ ಗ್ಯಾಂಗ್, ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿ ಮನೆಯಲ್ಲಿದ್ದ 20 ಲಕ್ಷ ರೂಪಾಯಿ ನಗದು ಹಾಗೂ ಅರ್ಧ ಕೆಜಿ ಚಿನ್ನವನ್ನು ದೋಚಿ ಪರಾರಿಯಾಗಿದೆ.
ಈ ಬಗ್ಗೆ ದೂರು ಸ್ವೀಕರಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಕಳ್ಳತನ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸೋಕೋ ತಂಡ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದಾಗ ಮಹತ್ವದ ಸುಳಿವು ಲಭ್ಯವಾಗಿತ್ತು. ಅಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ಪರೀಕ್ಷೆ ಮಾಡಿದಾಗ, ಅದು ಈಗಾಗಲೇ ಜೈಲಿನಲ್ಲಿರುವ ಒಬ್ಬ ಖೈದಿಯ ಬೆರಳಚ್ಚಿಗೆ ತಾಳೆಯಾಗಿದೆ.
ಇದು ಪೊಲೀಸರನ್ನು ಬೆಚ್ಚಿಬೀಳಿಸಿತ್ತು. ಜೈಲಿನಲ್ಲಿರುವ ವ್ಯಕ್ತಿ ದರೋಡೆ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡಿತ್ತು. ನಂತರದಲ್ಲಿ ಈ ಬಗ್ಗೆ ತನಿಖೆ ಮಾಡಿದಾಗ ಅಚ್ಚರಿಯ ವಿಚಾರವೊಂದು ಸಿಕ್ಕಿದೆ.
ಹೆಚ್ಚಿನ ತನಿಖೆ ನಡೆಸಿದಾಗ ಖೈದಿಯು ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿರುವುದು ಗೊತ್ತಾಗಿದೆ. ದರೋಡೆ ನಡೆದ ಮರುದಿನವೇ ಆತ ಪುನಃ ಜೈಲಿಗೆ ವಾಪಸ್ ಹೋಗಿರುವುದು ತಿಳಿದುಬಂದಿದೆ. ಅಂದರೆ, ಜೈಲಿನಿಂದ ಹೊರಬಂದು ದರೋಡೆ ಸ್ಕೆಚ್ ಹಾಕಿ, ಕಳ್ಳತನ ಮಾಡಿ ಯಾರಿಗೂ ಅನುಮಾನ ಬಾರದಂತೆ ಮತ್ತೆ ಜೈಲು ಸೇರಿಕೊಂಡಿದ್ದ.ಹೊಂಬಾಳೆಗೌಡ ಅವರು ಇತ್ತೀಚೆಗಷ್ಟೇ ಜಮೀನು ಮಾರಾಟ ಮಾಡಿದ್ದು, ಮನೆಯಲ್ಲಿ ಸುಮಾರು ಒಂದೂವರೆ ಕೋಟಿ ರೂ ನಗದು ಇತ್ತು ಎನ್ನಲಾಗಿದೆ. ಈ ವಿಚಾರ ದರೋಡೆಕೋರರಿಗೆ ಗೊತ್ತಾಗಿದ್ದು ಹೇಗೆ ಎಂಬುದು ಈಗ ಪೊಲೀಸರ ಮುಂದಿರುವ ದೊಡ್ಡ ಪ್ರಶ್ನೆ. ಮನೆಯಲ್ಲಿ ದೊಡ್ಡ ಮೊತ್ತದ ಹಣ ಇರುವ ಬಗ್ಗೆ ಕುಟುಂಬದವರಿಗೇ ತಿಳಿದಿದ್ದರಿಂದ, ಕುಟುಂಬದ ಸದಸ್ಯರ ಮೇಲೆಯೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಜೈಲಿನಲ್ಲಿರುವ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಇದೆ ಎಂದು ಹೇಳಿದ್ದಾರೆ

