ಬೆಂಗಳೂರು,
ಗುತ್ತಿಗೆದಾರರ ಕಮಿಷನ್ ಆರೋಪದ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿರುವ ಬಿಜೆಪಿಗೆ ಭಾರಿ ಮುಖಭಂಗ ಎದುರಾಗಿದೆ.
ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುವಾಗಲೇ ಬಿಜೆಪಿ ಶಾಸಕರೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ
ಗದಗ ಜಿಲ್ಲೆಯ ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಗುತ್ತಿಗೆದಾರರೊಬ್ಬರಿಂದ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ದಿಡೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚದ ಹಣದೊಂದಿಗೆ ಶಾಸಕರು ಹಾಗೂ ಅವರ ಇಬ್ಬರು ಆಪ್ತ ಸಿಬ್ಬಂದಿಗಳಾದ ಮಂಜುನಾಥ್ ಮತ್ತು ಗುರು ಎಂಬುವರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಶಿರಹಟ್ಟಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ರಸ್ತೆ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಮೊದಲ ದರ್ಜೆ ಗುತ್ತಿಗೆದಾರ ವಿಜಯ್ ಅವರು ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದರು.
ಈ ಕಾಮಗಾರಿ ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳಿಸಿ ಹಣ ಪಡೆದುಕೊಳ್ಳಲು ನೆರವು ನೀಡುವ ದೃಷ್ಟಿಯಿಂದ ಶಾಸಕರು 11 ಲಕ್ಷ ರೂಪಾಯಿ ಕಮಿಷನ್ ನೀಡಬೇಕು ಎಂದು ಹೇಳಿದ್ದರು ಇದಕ್ಕಾಗಿ ಅವರ ಇಬ್ಬರು ಆಪ್ತ ಸಿಬ್ಬಂದಿಗಳು ಗುತ್ತಿಗೆದಾರ ವಿಜಯ್ ಮೇಲೆ ಬಾರಿ ಒತ್ತಡ ಹೇರುತ್ತಿದ್ದರು.
ಶಾಸಕರು ಮತ್ತು ಅವರ ಆಪ್ತ ಸಿಬ್ಬಂದಿ ಹಣಕ್ಕಾಗಿ ತಮ್ಮ ಮೇಲೆ ಒತ್ತಡ ಏರುತ್ತಿರುವ ಕುರಿತಂತೆ ಗುತ್ತಿಗೆದಾರ ವಿಜಯ್, ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದಿದ್ದರು ಆನಂತರ ಅವರ ಸೂಚನೆಯ ಮೇರೆಗೆ 11 ಲಕ್ಷ ರೂಪಾಯಿ ಪೈಕಿ 5 ಲಕ್ಷ ನೀಡಲು ಹೋಗಿದ್ದಾರೆ.
ಅದರಂತೆ ನಿಗದಿತ ಸ್ಥಳದಲ್ಲಿ ಶಾಸಕ ಚಂದ್ರು ಲಮಾಣಿ ಅವರಿಗೆ 5 ಲಕ್ಷ ರೂಪಾಯಿ ಹಣ ಹಸ್ತಾಂತರಿಸುವ ತಿಳ ವೇಳೆ ಧಿಡೀರ್ ದಾಳಿ ನಡೆಸಿದ ಗದಗ ಜಿಲ್ಲಾ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ಹಣದೊಂದಿಗೆ ಶಾಸಕರನ್ನು ವಶಕ್ಕೆ ಪಡೆದಿದೆ ಇದಾದ ಬಳಿಕ ಅಲ್ಲಿಯೇ ಇದ್ದ ಶಾಸಕರ ಆಪ್ತ ಸಿಬ್ಬಂದಿಯಾದ ಮಂಜುನಾಥ ಮತ್ತು ಗುರು ಎಂಬುವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ಇದೆ ವೇಳೆ ಶಾಸಕ ಚಂದ್ರು ಲಮಾಣಿ ಅವರಿಗೆ ಸೇರಿದ ಲಕ್ಷ್ಮೇಶ್ವರದಲ್ಲಿರುವ ಬಾಲಾಜಿ ಆಸ್ಪತ್ರೆಯ ಮೇಲೂ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಹಲವು ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ
Previous Articleದ್ವೇಷ ಬಿತ್ತುವ ಸಿನಿಮಾ ನಮಗೆ ಬೇಡ: ‘ದಿ ಕೇರಳ ಸ್ಟೋರಿ-2’ ಬಹಿಷ್ಕರಿಸಲು ಕೇರಳ ಮುಖ್ಯಮಂತ್ರಿ ಖಡಕ್ ಸೂಚನೆ!
Next Article ನಿರ್ಣಾಯಕ ಘಟ್ಟ ತಲುಪಿದ ನಾಯಕತ್ವ ಬಿಕ್ಕಟ್ಟು

