ಕಳೆದ ಕೆಲವು ದಶಕಗಳಿಂದ ಇಡೀ ಪಶ್ಚಿಮ ಏಷ್ಯಾದ ರಾಜಕೀಯ ದಿಕ್ಸೂಚಿಯನ್ನು ನಿರ್ಧರಿಸುತ್ತಿದ್ದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಯುಗಾಂತ್ಯವಾಗಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಜಂಟಿ ವಾಯುದಾಳಿಯಲ್ಲಿ ಖಮೇನಿ ಹತ್ಯೆಯಾಗಿರುವುದು ಈಗ ಅಧಿಕೃತವಾಗಿ ದೃಢಪಟ್ಟಿದ್ದು, ಈ ಘಟನೆಯು ಇಡೀ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಕಿಚ್ಚು ಹಚ್ಚಿದೆ.
ತಮ್ಮ ಆರಾಧ್ಯ ದೈವದಂತಿದ್ದ ನಾಯಕನ ಅಗಲಿಕೆಯಿಂದ ಇರಾನ್ ಕಂಗಾಲಾಗಿದ್ದು, ಇರಾನ್ ಸರ್ಕಾರವು ದೇಶಾದ್ಯಂತ 40 ದಿನಗಳ ಕಾಲ ಅಧಿಕೃತ ಶೋಕಾಚರಣೆ ಘೋಷಿಸಿದೆ. ಗೌರವಾರ್ಥವಾಗಿ ಮುಂದಿನ 7 ದಿನಗಳ ಕಾಲ ಸಾರ್ವಜನಿಕ ರಜೆ ನೀಡಲಾಗಿದ್ದು, ಮಸೀದಿಗಳ ಮೇಲೆ ಕಪ್ಪು ಬಾವುಟಗಳು ರಾರಾಜಿಸುತ್ತಿವೆ. ಇಡೀ ದೇಶವೇ ರಸ್ತೆಗಿಳಿದು ಆಕ್ರೋಶ ಮತ್ತು ದುಃಖ ವ್ಯಕ್ತಪಡಿಸುತ್ತಿದೆ.
ಇಸ್ರೇಲ್‌ನ ಈ ಕಾರ್ಯಾಚರಣೆಯು ಕೇವಲ ರಾಜಕೀಯ ಗುರಿಯನ್ನು ಹೊಂದಿರದೆ, ಅಮಾಯಕರ ರಕ್ತಪಾತಕ್ಕೂ ಕಾರಣವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇರಾನ್‌ನ ಎರಡು ಪ್ರಮುಖ ಶಾಲೆಗಳ ಮೇಲೆ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಸುಮಾರು 85ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಹೆಚ್ಚಿನವರು ಶಾಲಾ ಮಕ್ಕಳೇ ಆಗಿರುವುದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದು, ಈ ಘೋರ ಕೃತ್ಯವು ಅಂತರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬೆಳವಣಿಗೆಯಿಂದ ಕೆರಳಿರುವ ರಷ್ಯಾ, ಅಮೆರಿಕ ಮತ್ತು ಇಸ್ರೇಲ್‌ನ ಕ್ರಮವನ್ನು ಕಟುವಾಗಿ ಟೀಕಿಸಿದೆ. ಇದು ಕೇವಲ ಒಂದು ದೇಶದ ಮೇಲಿನ ದಾಳಿಯಲ್ಲ, ಬದಲಾಗಿ ಜಾಗತಿಕ ಶಾಂತಿಯ ಮೇಲೆ ಎಸಗಿದ ದ್ರೋಹ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ಯುದ್ಧ ನಿಲ್ಲಿಸಿ ಮಾತುಕತೆಗೆ ಮುಂದಾಗದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಎಚ್ಚರಿಕೆ ನೀಡಿದೆ.
ದಾಳಿಯ ವೇಳೆ ಖಮೇನಿ ಎಲ್ಲಿದ್ದಾರೆ ಎಂಬುದು ಅತ್ಯಂತ ರಹಸ್ಯವಾಗಿತ್ತು. ಆದರೆ ಅಮೆರಿಕದ ಸುಧಾರಿತ ತಂತ್ರಜ್ಞಾನ ಮತ್ತು ಇಸ್ರೇಲ್‌ನ ಮೊಸಾದ್ ಗುಪ್ತಚರ ಸಂಸ್ಥೆಗಳು ಖಮೇನಿ ಅವರ ಅಡಗುತಾಣವನ್ನು ನಿಖರವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದವು ಎನ್ನಲಾಗಿದೆ. ಇದೇ ಮಾಹಿತಿಯ ಆಧಾರದ ಮೇಲೆ ನಡೆದ ಮಿಂಚಿನ ದಾಳಿಯು ಇರಾನ್‌ನ ಭದ್ರತಾ ಕೋಟೆಯನ್ನು ಧೂಳೀಪಟ ಮಾಡಿದೆ.
ಖಮೇನಿ ಹತ್ಯೆಯಿಂದ ಇರಾನ್ ಈಗ ನಾಯಕತ್ವದ ಬಿಕ್ಕಟ್ಟನ್ನು ಎದುರಿಸುತ್ತಿದ್ದರೂ, ಇರಾನ್‌ನ ಕ್ರಾಂತಿಕಾರಿ ಪಡೆಗಳು (IRGC) ಈ ಹತ್ಯೆಗೆ ತಕ್ಕ ಸೇಡು ತೀರಿಸಿಕೊಳ್ಳುವುದಾಗಿ ಗುಡುಗಿವೆ. ಇಸ್ರೇಲ್ ಇತಿಹಾಸದಿಂದಲೇ ಅಳಿಸಿಹೋಗುವ ಕಾಲ ಹತ್ತಿರ ಬಂದಿದೆ ಎಂದು ಇರಾನ್‌ನ ಉನ್ನತ ಮಿಲಿಟರಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಒಟ್ಟಾರೆಯಾಗಿ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಯಾವುದೇ ಕ್ಷಣದಲ್ಲಿ ಭೀಕರ ಯುದ್ಧ ಸ್ಫೋಟಗೊಳ್ಳುವ ಆತಂಕ ಎದುರಾಗಿದೆ.

