ಬೆಂಗಳೂರು,ಮೇ25- ಕಲ್ಯಾಣ ಕರ್ನಾಟಕದ 8 ಜಿಲ್ಲೆಗಳ ಶಾಲೆಗಳ ಹಾಜರಾತಿ ಹೆಚ್ಚಳ ಮತ್ತು ಮಕ್ಕಳಲ್ಲಿ ಕಾಣಿಸಿಕೊಂಡ ಅಪೌಷ್ಟಿಕತೆಯನ್ನು ನಿವಾರಿಸಲು ಜಾರಿಗೊಳಿಸಿದ್ದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೇಯಿಸಿದ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮತ್ತೆ ಆರಂಭವಾಗಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸ್ಥಗಿತಗೊಂಡ ಈ ಯೋಜನೆ ಇದೀಗ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುತ್ತಿದೆ.
ಜೂನ್ 1ರಿಂದ ಸರ್ಕಾರಿ ಹಾಗು ಅನುದಾನಿತ ಶಾಲೆಗಳಲ್ಲಿ ಈ ಯೋಜನೆಯನ್ನು ಆರಂಭಿಸಬೇಕು. ಇದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ
ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ 1ರಿಂದ 8ನೇ ತರಗತಿಯ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ( ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಇಲ್ಲವೇ ಶೇಂಗಾ ಚಿಕ್ಕಿ) ವಿತರಣೆ ಮಾಡಬೇಕು.
ಮೊಟ್ಟೆ ಅಥವ ಬಾಳೆಹಣ್ಣನ್ನು ಸಂರಕ್ಷಿಸಿಡಲು ಪ್ಲಾಸ್ಟಿಕ್ ಎಗ್ ಟ್ರೀ, ಫ್ರೂಟ್ ಟ್ರೀ, ಪ್ಲಾಸ್ಟಿಕ್ ಬಾಕ್ಸ್, ಡಬ್ಬಿಗಳನ್ನು ಖರೀದಿಸಬೇಕು. ಇಲ್ಲವೇ ದಾನಿಗಳಿಂದ ನೆರವು ಪಡೆದು ಹಾಳಾಗದಂತೆ ಸಂರಕ್ಷಿಸಬೇಕು ಎಂದು ಸೂಚಿಸಲಾಗಿದೆ.
ಯಾವುದೇ ಕಾರಣಕ್ಕೂ ಕ್ಲಸ್ಟರ್/ಬ್ಲಾಕ್/ ಜಿಲ್ಲಾ ಹಂತದಲ್ಲಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಖರೀದಿ ಪ್ರಕ್ರಿಯೆ ಮಾಡಬಾರದು. ಪ್ರತಿಯೊಂದು ಶಾಲೆಗಳು ಪ್ರತ್ಯೇಕವಾಗಿ ಆಯಾ ಶಾಲೆಯ ಖರೀದಿ ಸಮಿತಿಯ ಮಾರ್ಗದರ್ಶನದಲ್ಲಿ ನಿಯಮಗಳನ್ನು ಪಾಲಿಸಿ ಪಾರದರ್ಶಕವಾಗಿ ಖರೀದಿ ಮಾಡಬೇಕೆಂದು ಹೇಳಲಾಗಿದೆ. ತರಗತಿವಾರು ಮಕ್ಕಳ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ಖರೀದಿ ಮಾಡಬೇಕು. ವಾರದಲ್ಲಿ ಸರಾಸರಿ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ಲೆಕ್ಕ ಮಾಡಿ ಖರೀದಿಸಬೇಕೆ ಹೊರತು, ದಾಖಲಾತಿಗೆ ಅನುಗುಣವಾಗಿ ದಾಖಲಿಸಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಒಟ್ಟು 8 ಜಿಲ್ಲೆಗಳಲ್ಲಿರುವ 15,29,713 ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ವಾರದಲ್ಲಿ ಎರಡು ಮೊಟ್ಟೆ ಇಲ್ಲವೇ ಬಾಳೆಹಣ್ಣು ಅಥವ ಶೇಂಗಾಚಿಕ್ಕಿಯನ್ನು ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ 40ರ ಅನುಪಾತದಲ್ಲಿ ಅನುದಾನವನ್ನು ನೀಡಲಿದೆ.
Previous Articleಬಾರಾಮುಲ್ಲಾದಲ್ಲಿ ಮೂವರು ಪಾಕ್ ಉಗ್ರರ ಹತ್ಯೆ
Next Article ಸ್ಪೈಸ್‌ಜೆಟ್ ವಿಮಾನ ಸೇವೆಯಲ್ಲಿ ವ್ಯತ್ಯಯ