ಬೆಂಗಳೂರು,ಮೇ.27 – ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಚರಸ್ ಮಾರಾಟ ಮಾಡುತ್ತಿದ್ದ ಖತರ್ನಾಕ್ ಇಂಜಿನಿಯರ್ ಒಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಪಿನಗರದ ರವಿತೇಜ ಅಲಿಯಾಸ್ ಕಿರಣ್ (32)ಬಂಧಿತ ಆರೋಪಿಯಾಗಿದ್ದು ಆತನಿಂದ 8 ಲಕ್ಷ ಮೌಲ್ಯದ 280 ಗ್ರಾಂ ಚರಸ್, ಐಫೊನ್ ಹಾಗು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಅಂಗಡಿ ಅವರು ತಿಳಿಸಿದ್ದಾರೆ.
ಆರೋಪಿಯು ಇಂಜಿನಿಯರಿಂಗ್ ಮುಗಿಸಿದ ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು ಹಲವಾರು ಕಡೆಗಳಲ್ಲಿ ಉದ್ಯೋಗಕ್ಕೆ ಹುಡುಕಾಟ ನಡೆಸಿ ವಿಫಲನಾಗಿದ್ದ.
ಇದರಿಂದ ಬೇಸತ್ತು ಸುಲಭವಾಗಿ ಹಣ ಗಳಿಸಲು ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಜೊತೆಗೂಡಿ ಹಿಮಾಚಲ ಪ್ರದೇಶದ ಕಸೋಲ್ ನಿಂದ ಕಡಿಮೆ ಬೆಲೆಗೆ ಚರಸ್ ತಂದು ಹೆಚ್ಚಿನ ಬೆಲೆಗೆ ಪುಟ್ಟೇನಹಳ್ಳಿ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿಸಿದರು.
ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.