ಸಹಾಯಕರ ಹುದ್ದೆ ಕಡಿತ ಪ್ರಸ್ತಾವನೆ ಕೈಬಿಡಬೇಕು ನಿವೃತಿಯಾದ ಅಧಿಕಾರಿ, ನೌಕರರ ಪುನರ್ ನೇಮಕಾತಿ ರದ್ದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧ ಸಚಿವಾಲಯ ನೌಕರರು ಮುಷ್ಕರ ನಡೆಸಿದರು.
ಮುಷ್ಕರ ನಡೆಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಚ್ಚರಿಕೆಗೆ ಸೊಪ್ಪು ಹಾಕದ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದರು.
ಸಚಿವಾಲಯ ನೌಕರರ ಮುಷ್ಕರದಿಂದಾಗಿ ಹಲವು ಇಲಾಖೆಯ ಕೆಲಸ ಕಾರ್ಯ ಸ್ಥಗಿತಗೊಂಡಿತು. ಹಿರಿಯ ಅಧಿಕಾರಿಗಳು ಪರದಾಡುವಂತಾಯಿತು. ನೌಕರರ ಸಂಘದದವರು ಸಚಿವಾಲಯದ ಬಂದ್ ಆಚರಿಸಲು ಕರೆ ನೀಡಿರುವುದು ಕಾನೂನು ಬಾಹಿರವಾಗಿರುತ್ತದೆ. ಈ ಕ್ರಮವನ್ನು ಸರ್ಕಾರವು ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸಂಘದ ಸಿಬ್ಬಂದಿ ಕಚೇರಿಗೆ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಒಂದು ವೇಳೆ ಸಚಿವಾಲಯದ ಸಿಬ್ಬಂದಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕಚೇರಿಗೆ ಗೈರು ಹಾಜರಾದಲ್ಲಿ ಅದನ್ನು ಲೆಕ್ಕಕ್ಕಿಲ್ಲದ ಅವಧಿ (Dies-non) ಎಂದು ಪರಿಗಣಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿತ್ತು ಇದಕ್ಕೆ ನೌಕರರು ಮನ್ನಣೆ ನೀಡಿಲ್ಲ.
ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಂಘ ಹಲವು ಬಾರಿ ಮನವಿಗಳನ್ನು ಸಲ್ಲಿಸಿದೆ. ಆದರೆ ಯಾವ ಮನವಿಯನ್ನು ಪರಿಗಣಿಸಿ, ಸಭೆ ಕರೆದು ಚರ್ಚಿಸಲಿಲ್ಲ. ಆದ್ದರಿಂದ ಸಚಿವಾಲಯ ಸಂಘ ಪ್ರತಿಭಟನೆ ಎಂದು ಸಂಘದ ಪ್ರತಿನಿಧಿಗಳು ತಿಳಿಸಿದರು.
Previous ArticleDrugs ಮಾರಾಟಕ್ಕಿಳಿದ ನಿರುದ್ಯೋಗಿ
Next Article Drugs ಕೇಸ್‌ನಲ್ಲಿ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್