ಬೆಂಗಳೂರು, ಜೂ.2– ಮುಂಬರುವ ವಿಧಾನಸಭೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ದೃಷ್ಟಿಯಿಂದ ಕಾಂಗ್ರೆಸ್ ಇಂದಿನಿಂದ ಎರಡು ದಿನಗಳ ಕಾಲ ನವಸಂಕಲ್ಪ ಚಿಂತನಾ ಶಿಬಿರ ನಡೆಸುತ್ತಿದೆ.
ಪಕ್ಷ ಸಂಘಟನೆಗೆ ಸಂಬಂಧಪಟ್ಟಂತೆ ಪ್ರಮುಖ ನಿರ್ಣಯಗಳನ್ನು ಈ ಶಿಬಿರದಲ್ಲಿ ಕೈಗೊಳ್ಳಲಾಗುತ್ತಿದ್ದು ಬಿಜೆಪಿ ಮತ್ತು ಸಂಘಪರಿವಾರವನ್ನು ಕಟ್ಟಿಹಾಕಿ ಕಾಂಗ್ರೆಸ್ ಗೆಲುವಿಗೆ ಬೇಕಾದ ಕಾರ್ಯತಂತ್ರಗಳನ್ನು ಈ ಸಭೆಯಲ್ಲಿ ರೂಪಿಸಲಾಗುತ್ತಿದೆ.
ಶಿಬಿರದಲ್ಲಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಹಿಂದಿನ ಚುನಾವಣಾ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಹಿರಿಯ ನಾಯಕರು ಭಾಗವಹಿಸಿದ್ದಾರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ವೇಣುಗೋಪಾಲ್ ಮಲ್ಲಿಕಾರ್ಜುನ ಖರ್ಗೆ ಮಾರ್ಗದರ್ಶನ ಮಾಡಲಿದ್ದಾರೆ.
ಶಿಬಿರದಲ್ಲಿ ಆರ್ಥಿಕ ಸ್ಥಿತಿಗತಿ, ಸಾಮಾಜಿಕ ನ್ಯಾಯಾ, ಬೆಲೆ ಏರಿಕೆ, ಸಂಘಟನೆ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಚರ್ಚೆಗಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ಅವುಗಳಲ್ಲಿನ ಸದಸ್ಯರು ಎರಡು ದಿನಗಳ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿ ಸೂಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ. ನಾಳೆ ಸಂಜೆ ಶಿಬಿರದಲ್ಲಿ ಕೈಗೊಂಡ ನಿರ್ಣಯಗಳು ಪ್ರಕಟವಾಗಲಿವೆ.
ಶಿಬಿರ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷಕ್ಕೆ ಹೊಸದಾಗಿ ನೇಮಕವಾಗಿರುವ ಪದಾಧಿಕಾರಿಗಳು ತಿಂಗಳಲ್ಲಿ ಕನಿಷ್ಠ 20 ದಿನ ಸಂಘಟನೆಗೆ ಸಮಯ ಮೀಸಲಿಡಬೇಕು. ಗ್ರಾಪಂ ಮಟ್ಟದಲ್ಲೂ ಸಭೆ ನಡೆಸಬೇಕು. ಸ್ಥಳೀಯವಾಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬೇಕು. ಬೂತ್, ಪಂಚಾಯತ್ ಮತ್ತು ಮಂಡಲ್ ಸಮಿತಿಗಳನ್ನು ಕಾಲಮಿತಿಯಲ್ಲಿ ರಚಿಸಬೇಕು ಎಂದು ಸೂಚಿಸಿದರು.
ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಂಗವಾಗಿ ಆ.9ರಿಂದ 15ರವರೆಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರಧ್ವಜ ಹಿಡಿದು ಪಾದಯಾತ್ರೆ ಆಯೋಜಿಲಾಗುವುದು. ಆ.15ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಶಾಸಕಾಂಗ ಪಕ್ಷದ ನಾಯಕರು ಹಾಗು ತಮ್ಮ ಬಳಿ ಮಾತ್ರ ಚರ್ಚೆ ಮಾಡಬೇಕು. ಬಹಿರಂಗವಾಗಿ ಹೇಳಿಕೆ ನೀಡಬಾರದು. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡಬೇಕೆಂದು ಅವರು ಸೂಚಿಸಿದರು.
ಸಮಿತಿಗಳಲ್ಲಿ ಇರುವವರು ಎಐಸಿಸಿಯ ಮಾರ್ಗಸೂಚನೆಗನುಸಾರ ಚರ್ಚೆ ಮಾಡಿ ಸ್ಪಷ್ಟ ನಿಲುವುಗಳನ್ನು ತೆಗೆದುಕೊಳ್ಳಬೇಕು. ಆದರೆ, ಯಾರೂ ಕೂಡ ಮಾಧ್ಯಮಗಳಿಗೆ ಸಮಿತಿಯ ಚರ್ಚೆಗಳ ಮಾಹಿತಿಯನ್ನು ಸೋರಿಕೆ ಮಾಡಬಾರದು. ಒಂದು ವೇಳೆ ಅಂತಹ ವಿಷಯಗಳು ತಮ್ಮ ಗಮನಕ್ಕೆ ಬಂದರೆ ಮುಂದಿನ ದಿನಗಳಲ್ಲಿ ತಪ್ಪಿತಸ್ಥನಾಯಕರನ್ನು ಯಾವ ದೃಷ್ಟಿಯಿಂದ ನೋಡಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡಬೇಕಾಗುತ್ತದೆ ಎಂದರು.
Previous ArticleBoyfriend ಸಾಲ ತೀರಿಸೋಕೆ ಕಳ್ಳತನ!
Next Article ಇಬ್ಬರು ಮಕ್ಕಳನ್ನು ಬಿಟ್ಟು ತಾಯಿ ನೇಣಿಗೆ ಶರಣು!