ಸ್ಯಾಂಡಲ್ ವುಡ್ ಹಿರಿಯ ನಟ ಉದಯ್ ಹುತ್ತಿನಗದ್ದೆ (61) ಅವರು ರಾಜಾಜಿನಗರದ ತಮ್ಮ ನಿವಾಸದಲ್ಲಿ ಗುರುವಾರ ನಿಧನರಾದರು. ಅವರಿಗೆ ಪತ್ನಿ, ನಟಿ ಲಲಿತಾಂಜಲಿ ಮತ್ತು ಇಬ್ಬರು ಪುತ್ರರು ಇದ್ದಾರೆ.
ಚಿಕ್ಕಮಗಳೂರು ಸಮೀಪದ ಬಸರಿಕಟ್ಟೆ ಸಮೀಪದ ಹುತ್ತಿನಗದ್ದೆಯವರಾದ ಉದಯ್ ಅವರು ವೃತ್ತಿಪರ ಛಾಯಾಗ್ರಾಹಕರಾಗಿದ್ದರು. 1980ರ ದಶಕದ ಕೊನೆಯಲ್ಲಿ ‘ಆರಂಭ’, ‘ಕ್ರಮ’, ‘ಉಂಡೂ ಹೋದ ಕೊಂಡೂ ಹೋದ’, ‘ಶಿವಯೋಗಿ ಅಕ್ಕಮಹಾದೇವಿ’, ‘ಅಮೃತಬಿಂದು’, ‘ಉದ್ಭವ’ ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತರಾಗಿದ್ದರು.ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್ ಮುಂತಾದವರ ಜೊತೆಗೆ ಉದಯ್ ತೆರೆ ಹಂಚಿಕೊಂಡಿದ್ದರು. ರಾಜ್ ಕುಮಾರ್ ಅಭಿನಯದ ದೇವತಾ ಮನುಷ್ಯ ಸಿನಿಮಾದಲ್ಲಿ ಸುಧಾರಾಣಿ ಜೋಡಿಯಾಗಿ ಉದಯ್ ಹುತ್ತಿನಗದ್ದೆ ನಟಿಸಿದರು. ಮೃತರ ಅಂತ್ಯಕ್ರಿಯೆ ಇಂದು ಚಾಮರಾಜಪೇಟೆ ರುದ್ರಭೂಮಿಯಲ್ಲಿ ನಡೆಯಲಿದೆ.