ತುಮಕೂರು ಜಿಲ್ಲಾ ಕಾರಾಗೃಹ. ತುಮಕೂರಿನಿಂದ ಏಳೆಂಟು ಕಿಲೋಮೀಟರ್ ದೂರ ಹೋದ್ರೆ, ಸಿಗೋದು ಅಣ್ಣೇನಹಳ್ಳಿ. ಇದೇ ಅಣ್ಣೇನಹಳ್ಳಿ ಊರ ಹೊರಗೆ ಸುಮಾರು 20 ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿರೋದು ತುಮಕೂರು ಜಿಲ್ಲಾ ಕಾರಾಗೃಹ. 15 ಅಡಿ ಎತ್ತರದ ಗೋಡೆ ಒಳಗಿನ ಸ್ಥಿತಿ ಹೇಗಿದೆಯೋ ಏನೋ? ಆದ್ರೆ ಜೈಲು ಹೊರಗಿನ ಸ್ಥಿತಿ ಮಾತ್ರ ಶೋಚನೀಯ.
ಜೈಲಿನ ಮೊದಲ ಆರು ಅಡಿ ಗೋಡೆ ಒಳಗೆ ಎಂಟ್ರಿ ಹಾಕಿದ್ರೆ, ಅಲ್ಲಿ ನಮಗೆ ಜೈಲಿನ ಮೇನ್ ಗೇಟ್ ಕಾಣಿಸುತ್ತದೆ. ಆರೋಪಿಗಳನ್ನ ಕರೆದುಕೊಂಡು ಬರೋದು, ಒಳಗೆ ಕರೆದುಕೊಂಡು ಹೋಗೋದು ಎಲ್ಲವೂ ಇದೇ ದ್ವಾರದಿಂದಲೇ. ಇನ್ನು ಒಳಗಿರುವ ಬಂಧಿತ ಆರೋಪಿಗಳನ್ನ ನೋಡೋಕೆ ಅಂತ ದೂರದೂರುಗಳಿಂದ ಬರೋರು ಕೂಡ ಕಾಂಪೌಂಡಿನೊಳಗೆ ಕೂತು ಕಾಯಬೇಕು. ತಮ್ಮ ಸರದಿ ಬರೋವರೆಗೂ ಕುಳಿತುಕೊಳ್ಳೋಣ ಅಂದ್ರೆ ಇರೋದು ಎರಡು ಕಲ್ಲು ಬೆಂಚು. ಜೈಲಿನ ಒಳಗಿರೋ ಖೈದಿಗಳ ಸಂಖ್ಯೆ ಭರ್ತಿ 432.
ಕನಿಷ್ಟ ದಿನವೊಂದಕ್ಕೆ ನೂರು ಜನ ಆರೋಪಿಗಳನ್ನ ನೋಡೋಕೆ ಮೂನ್ನೂರು ಮಂದಿ ಜೈಲಿಗೆ ವಿಸಿಟ್ ಹಾಕ್ತಾರೆ. ಈ ರೀತಿ ಬರೋರಿಗೆ ಕುಳಿತುಕೊಳ್ಳಲು ಖುರ್ಚಿ ಇರಲಿ, ಕುಡಿಯೋಕೆ ನೀರು ಕೂಡ ಗತಿ ಇಲ್ಲ. ಆವರಣದಲ್ಲಿ ಒಂದು ನೀರಿನ ಟ್ಯಾಂಕ್ ಇದೆ, ಅದರಲ್ಲಿರುವ ನಲ್ಲಿಗಳು ಬಂದ್ ಆಗಿವೆ. ಇನ್ನು ಟ್ಯಾಂಕಿನೊಳಗೆ ನೀರು ಇದೆಯೋ ಇಲ್ವೋ ಗೊತ್ತಿಲ್ಲ. ತೊಳೆದು ವರ್ಷ ಕಳೆದಿರೋದಂತು ಸತ್ಯ. ಇನ್ನು ಶೌಚಾಲಯದ ಕಥೆಯನ್ನಂತೂ ಹೇಳುವಂತೆಯೂ ಇಲ್ಲ ಕಣ್ಣಾರೆ ನೋಡುವಂತೆಯೂ ಇಲ್ಲ. ಅಷ್ಟರ ಮಟ್ಟಿಗೆ ಗಬ್ಬೆದ್ದು ನಾರುತ್ತಿದೆ ಜೈಲಿನ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ.
ಈ ಫೋಟೋಗಳನ್ನ ನೀಟಾಗಿ ನೋಡಿ. ಇದು ಜೈಲಿಗೆ ಎಂಟ್ರಿ ಹಾಕೋಕೆ ಬರುವ ಸಾರ್ವಜನಿಕರು ಬಳಸುವ ಶೌಚಾಲಯ. ನಾಯಿಗಳು ಹಂದಿಗಳು ವಾಸಿಸುವ ತಾಣದಂತಿದೆ. ಇದರೊಳಗೆ ಕಾಲಿಟ್ರೆ ಗಬ್ಬು ವಾಸನೆ, ಜೊತೆಗೆ ಹಳೆ ಕಬ್ಬಿಣ, ಪ್ಲಾಸ್ಟಿಕ್, ಪೇಪರ್ಗಳದ್ದೇ ಸಾಮ್ರಾಜ್ಯ. ಜೈಲಿನಲ್ಲಿರೋರನ್ನ ನೋಡೋಕೆ ಬರುವ ಪುರುಷರಾದ್ರೆ ಎಲ್ಲೋ ಮೈದಾನದಲ್ಲೋ ಪೊದೆಯ ಮರೆಯಲ್ಲೋ ಮೂತ್ರ ವಿಸರ್ಜನೆ ಮಾಡಿ ಬಿಡ್ತಾರೆ. ಆದ್ರೆ ಗಂಡನನ್ನ, ಅಪ್ಪನನ್ನ, ಅಣ್ಣನನ್ನ, ತಮ್ಮನನ್ನ, ಮಗನನ್ನ ನೋಡೋಕೆ ಬರೋ ಹೆಣ್ಣು ಮಕ್ಕಳ ಪಾಡೇನು?
ಇನ್ನು ಈ ಬಗ್ಗೆ ಜೈಲು ಅಧೀಕ್ಷಕಿಯಾಗಿರುವ ಶಾಂತಮ್ಮರನ್ನ ವಿಚಾರಿಸಿದ್ರೆ, ನಮ್ಮ ಜೈಲಿನಲ್ಲಿ ಎಲ್ಲವೂ ಕ್ಲೀನ್ ಕ್ಲೀನ್ ಅಂತಾರೆ. ಸ್ವತಃ ತಾನೊಬ್ಬಳು ಹೆಣ್ಣು ಮಗಳಾಗಿ ಮತ್ತೋರ್ವ ಹೆಣ್ಣು ಮಗಳ ಕಷ್ಟದ ಅರಿವಿಲ್ಲ ಅಂದ್ರೆ, ಏನ್ ಹೇಳೋದು ಹೇಳಿ. ಇನ್ನು ಅಲ್ಲಿ ಖೈದಿಗಳನ್ನ ನೋಡೋಕೆ ಬರೋರ ಬಳಿ ಸಿಬ್ಬಂದಿಗಳು ಲಂಚ ಪೀಕ್ತಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ನಾಲ್ಕು ಸೇಬು ಹಣ್ಣುಗಳನ್ನೋ ಇಲ್ಲವೇ ನಾಲ್ಕು ಬಿರಿಯಾನಿಯನ್ನೋ ಕೈದಿಗೆ ಕೊಡಿ ಅಂತ ಕಳಿಸಿಕೊಟ್ರೆ, ಒಳಗೆ ತಲುಪೋದು ಒಂದೋ ಎರಡೋ ಅಷ್ಟೆ ಅಂತಾರೆ ಹೆಸರು ಹೇಳಲು ಇಚ್ಚಿಸದ ಸಾರ್ವಜನಿಕ.
ಒಟ್ನಲ್ಲಿ ಇದು ತುಮಕೂರು ಜಿಲ್ಲಾ ಕಾರಾಗೃಹದ ಕರ್ಮಕಾಂಡ. ಬಗೆದಷ್ಟೂ ಭಯಾನಕವಾಗಿದೆ. ಖೈದಿಗಳಿಗಷ್ಟೆ ಅಲ್ಲ, ಅಲ್ಲಿ ನೋಡೋಕೆ ಬರುವವರಿಗೂ ಈ ಜೈಲು ಅಕ್ಷರಶಃ ನರಕವಾಗಿದೆ. ಇನ್ನಾದ್ರೂ ಸಂಬಧಪಟ್ಟವರು ಜೈಲಿನ ಅವ್ಯವಸ್ಥೆಯನ್ನ ಸರಿ ಪಡಿಸ್ತಾರಾ ಕಾದು ನೋಡಬೇಕಿದೆ.