ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣ ಕಡಿಮೆಯಾಯಿತು ಎನ್ನುತ್ತಿರುವಾಗಲೇ ಮತ್ತೆ ನಾಲ್ಕನೆ ಅಲೆ ಕಾಣಿಸಿಕೊಂಡಿದೆ ಅದರಲ್ಲೂ ದೆಹಲಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದು,ಆತಂಕ ಮೂಡಿಸಿದೆ. ನೋಯ್ಡಾದ ಖೈತಾನ್ ಪಬ್ಲಿಕ್ ಸ್ಕೂಲ್ ನ 13 ವಿದ್ಯಾರ್ಥಿಗಳು ಹಾಗು ಮೂವರು ಶಿಕ್ಷಕರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದರಿಂದ ಶಾಲೆಯನ್ನು ಬಂದ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಅದೇ ರೀತಿ ಗಾಜಿಯಾಬಾದ್ ನ ಇಂದಿರಾಪುರಂ ಪ್ರದೇಶದಲ್ಲಿರುವ ಶಾಲೆಯೊಂದರಲ್ಲಿ ಕೋವಿಡ್ ಪ್ರಕರಣ ವರದಿಯಾದ ನಂತರ ಶಾಲೆಗೆ ಮೂರು ದಿನಗಳ ಕಾಲ ರಜೆ ಘೋಷಿಸಿದ್ದು, ಮುಂದಿನ ಒಂದು ವಾರ ಆನ್ ಲೈನ್ ತರಗತಿ ನಡೆಸುವುದಾಗಿ ತಿಳಿಸಿದೆ.
ಈ ನಡುವೆ ದೆಹಲಿ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿದ್ದು ಸೋಂಕು ನಿಯಂತ್ರಣ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು.