ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರಾವಾಧಿ ಜುಲೈ 25ಕ್ಕೆ ಕೊನೆಯಾಗಲಿದೆ. ಅದಕ್ಕೂ ಮುನ್ನವೇ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕಿದೆ. ಇದಕ್ಕಾಗಿ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಗಳು ಆರಂಭಗೊಂಡಿವೆ.
ರಾಮನಾಥ್ ಕೋವಿಂದ್ ಅವರನ್ನೇ ಎರಡನೇ ಅವಧಿಗೆ ರಾಷ್ಟ್ರಪತಿಯಾಗಿ ಮುಂದುವರಿಸಲು ಅವಕಾಶವಿದೆ. ಆದರೆ, ಆ ಸಾಧ್ಯತೆಗಳು ತೀರಾ ಕಡಿಮೆ ಎಂಬುದನ್ನು ಸೂಚಿಸುತ್ತವೆ ಈಚಿನ ಬೆಳವಣಿಗೆಗಳು.
ಹಿಂದುಳಿದ ಸಮುದಾಯಕ್ಕೆ ಸೇರಿದ ಬಿಹಾರದ ಕೋವಿಂದ್ ಅವರು ಯಾವುದೇ ವಿವಾದಗಳಿಗೆ ಅವಕಾಶ ಕೊಡದೆ ತಮ್ಮ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದರು ಬಿಜೆಪಿ ಮೂಲದವರಾದ ಇವರನ್ನು ಮತ್ತೊಂದು ಅವಧಿಗೆ ಮುಂದುವರೆಸಲು ಬಿಜೆಪಿಯ ನಾಯಕರಲ್ಲಿ ಅಂತಹ ಆಸಕ್ತಿ ಕಂಡುಬರುತ್ತಿಲ್ಲ ಹೀಗಾಗಿ ಬೇರೆಯವರಿಗಾಗಿ ಹುಡುಕಾಟ ನಡೆದಿದೆ.
ಪ್ರತಿಪಕ್ಷ ಪಾಳಯದಲ್ಲೂ ಈ ವಿಷಯವಾಗಿ ಸಾಕಷ್ಟು ವಿದ್ಯಮಾನಗಳು ನಡೆಯುತ್ತಿವೆ.ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಈ ನಿಟ್ಟಿನಲ್ಲಿ ಬಹು ಹಿಂದೆಯೇ ಪ್ರಯತ್ನ ಆರಂಭಿಸಿದ್ದರು.ಈ ವಿಷಯವಾಗಿ ಪ್ರತಿಪಕ್ಷಗಳೆಲ್ಲಾ ಒಟ್ಟಾಗುವ ಅಗತ್ಯವಿದೆ ಎಂದು ಪ್ತತಿಪಾದಿಸಿದರೆ ಮತ್ತೊಂದೆಡೆಯಲ್ಲಿ ಮಮತಾ ಬ್ಯಾನರ್ಜಿ,ಶರದ್ ಪವಾರ್, ಕೆ.ಚಂದ್ರಶೇಖರ್ ರಾವ್ ಕೂಡಾ ಪ್ರಯತ್ನ ನಡೆಸಿದ್ದಾರೆ.
ದೇಶದ ಎಲ್ಲಾ ಚುನಾಯಿತ ಸಂಸದರು ಮತ್ತು ಚುನಾಯಿತ ಶಾಸಕರಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇದೆ. ಸಂಸದರ ಒಟ್ಟು ಸಂಖ್ಯೆ 776 ಇದ್ದರೆ, ಶಾಸಕರ ಒಟ್ಟು ಸಂಖ್ಯೆ 4,120. ಇದೆ. ದೇಶದ ಒಟ್ಟು ಮತದಾರರು, ಜನಸಂಖ್ಯೆ ಹಾಗೂ ಪ್ರದೇಶದ ಆಧಾರದಲ್ಲಿ ಈ ಮತಗಳಿಗೆ ಮೌಲ್ಯಾಂಕನ ನಿಗಧಿ ಪಡಿಸಲಾಗಿದೆ ಅದರಂತೆ ಈ ಜನಪ್ರತಿನಿಧಿಗಳ ಮತಗಳ ಒಟ್ಟು ಮೌಲ್ಯ 10,98,903 ಆಗಲಿದೆ.
ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನು ಗಮನಿಸುವುದಾದರೆ, ದೇಶದ ಎಲ್ಲಾ ರಾಜ್ಯಗಳ
ವಿಧಾನಸಭೆಗಳಲ್ಲಿ ಎನ್ಡಿಎ 2.22 ಲಕ್ಷ ಮತ ಮೌಲ್ಯ ಹೊಂದಿದ್ದರೆ, ಎನ್ಡಿಎಯೇತರ ಪಕ್ಷಗಳ ಮತ ಮೌಲ್ಯ 2.77 ಲಕ್ಷವಿದೆ. ಹಾಗೆಯೇ ಸಂಸತ್ತಿನಲ್ಲಿ ಎನ್ಡಿಎ ಮತ ಮೌಲ್ಯ 3.20 ಲಕ್ಷ ಇದ್ದರೆ, ವಿರೋಧ ಪಕ್ಷಗಳು 1.72 ಲಕ್ಷ ಮತ ಮೌಲ್ಯ ಹೊಂದಿವೆ.ಈ ಎಲ್ಲ ಮತಗಳು ಚಲಾವಣೆಯಾದರೆ ಗೆಲ್ಲುವ ಅಭ್ಯರ್ಥಿಗೆ 5,49,452 ಮತಗಳ ಅಗತ್ಯ ಇದೆ.
ಈಗಿನ ಸಾಂಖ್ಯಿಕ ಬಲ ನೋಡಿದರೆ ಬಿಜೆಪಿ ನೇತೃತ್ವದ ಎನ್ಡಿಎ ಬೆಂಬಲಿತ ಅಭ್ಯರ್ಥಿಯೇ ಮುಂದಿನ ರಾಷ್ಟ್ರಪತಿಯಾಗುವುದು ನಿಚ್ಚಳವಾಗಿದೆ. ಆದರೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಚರ್ಚೆ ಬಿಜೆಪಿ ಪಾಳಯದಲ್ಲಿ ಇನ್ನೂ ಆರಂಭವಾಗಿಲ್ಲ. ಒಂದು ಮೂಲಗಳ ಪ್ರಕಾರ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಕೇರಳ ರಾಜ್ಯಪಾಲ ಆರೀಪ್ ಮೊಹಮ್ಮದ್ ಖಾನ್, ಹಿರಿಯ ನಾಯಕಿ ದ್ರೌಪದಿ ಮುರ್ಮು ಸೇರಿದಂತೆ ಹಲವರ ಹೆಸರುಗಳು ಚರ್ಚೆಯಲ್ಲಿವೆ.
ಮತ್ತೊಂದು ಕಡೆಯಲ್ಲಿ ಹೊಸ ಪ್ರಯೋಗದ ಚರ್ಚೆ ನಡೆಯುತ್ತಿರುವ ವಿರೋಧ ಪಕ್ಷಗಳಲ್ಲಿ ಒಂದು ಒಕ್ಕೂಟ ರಚನೆಗೆ ರಾಷ್ಟ್ರಪತಿ ಚುನಾವಣೆಯು ಒಂದು ಮಹತ್ವದ ವೇದಿಕೆಯಾಗಲಿದೆಯೇನೋ ಎಂಬಂತೆ ಬೆಳವಣಿಗೆಗಳು ನಡೆಯುತ್ತಿವೆ.
ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಟ್ಟಾಗುವುದಾದರೆ, 2024ರ ಚುನಾವಣೆಗೆ ಒಕ್ಕೂಟ ರಚಿಸಿಕೊಳ್ಳುವುದು ವಿರೋಧ ಪಕ್ಷಗಳಿಗೆ ಸುಲಭವಾಗಲಿದೆ.ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಹೀಗಾಗಿ ಇದು ವಿರೋಧ ಪಕ್ಷಗಳಿಗೆ ಮಹತ್ವದ ಚುನಾವಣೆಯಾಗಿದೆ. ಎಲ್ಲಾ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ರಾಷ್ಟ್ರಪತಿ ಚುನಾವಣೆ ಕಣಕ್ಕೆ ಇಳಿಸುವ ಪ್ರಸ್ತಾವವನ್ನು ಹಲವು ವಿರೋಧ ಪಕ್ಷಗಳು ಇರಿಸಿವೆ. ಆದರೆ, ಎಲ್ಲಾ ವಿರೋಧ ಪಕ್ಷಗಳು ಇನ್ನೂ ಒಟ್ಟಿಗೆ ಕೂತು ತಮ್ಮ ಹೋರಾಟದ ದಿಕ್ಕನ್ನು ನಿರ್ಧರಿಸಿಲ್ಲ.
ಈ ರಾಜಕೀಯ ಲೆಕ್ಕಾಚಾರ, ಮೇಲಾಟ ಎನೇ ಇರಲಿ ರಾಷ್ಟ್ರಪತಿ ಹುದ್ದೆ ಎನ್ನುವುದು ದೇಶದ ಅತ್ಯುನ್ನತ ಹುದ್ದೆಯಾಗಿದ್ದು,ರಾಜಕೀಯ, ಧರ್ಮ ಜಾತಿ ಮೊದಲಾದ ಅಂಶಗಳನ್ನು ಮೀರಿದ ಹುದ್ದೆಯಾಗಿದೆ.
ಒಂದೆರಡು ಅಪವಾದಗಳನ್ನು ಹೊರತುಪಡಿಸಿ ಇಲ್ಲಿಯವರೆಗೆ ಈ ಘನತೆವೆತ್ತ ಹುದ್ದೆಯನ್ನು ಅಲಂಕರಿಸಿದ ಮಹನೀಯರು ಇದರ ಘನತೆ, ಗೌರವಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿಭಾಯಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ ಹೆಚ್ಚಿಸಿದ್ದಾರೆ.
ರಾಜಕೀಯ ಪಕ್ಷವೊಂದರ ಸದಸ್ಯರಾಗಿದ್ದರೂ ಜೈಲ್ ಸಿಂಗ್, ಶಂಕರ್ ದಯಾಳ್ ಶರ್ಮ, ವೆಂಕಟರಾಮನ್, ಕೆ.ಆರ್ ನಾರಾಯಣ್. ಪ್ರಣಬ್ ಮುಖರ್ಜಿ ತಮ್ಮದೇ ಆದ ಛಾಪು ಉಳಿಸಿದ್ದಾರೆ ರಾಜಕೀಯ ಹೊರತು ಪಡಿಸಿ ಈ ಹುದ್ದೆ ಅಲಂಕರಿಸಿದ ಸರ್ವೆಪಲ್ಲಿ ರಾಧಾಕೃಷ್ಣನ್, ಅಬ್ದುಲ್ ಕಲಾಂ ಅವರಂತಹವರಂತೂ ಇಡೀ ಜಗತ್ತಿನ ಮುಂದೆ ಭಾರತೀಯರು ಹೆಮ್ಮೆಯಿಂದ ಬೀಗುವಂತೆ ಮಾಡಿದರು.
ಈ ಹುದ್ದೆಯೇ ಅಂತಹದು.ಅದರ ಘನತೆ ಗೌರವ ಆ ಮಟ್ಟದ್ದಾಗಿದೆ.ದೇಶಗಳಲ್ಲಿ ಇತ್ತೀಚಿಗೆ ನಡೆಯುತ್ತಿರುವ ಕೆಲ ಆತಂಕಕಾರಿ ಹಾಗೂ ಅನಗತ್ಯ ವಿವಾದಗಳು ದೇಶದ ಘನತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚ್ಯುತಿ ತಂದಿವೆ.
ದೇಶದ ಮೂಲ ಆಶಯವಾದ ಸೋದರತ್ವ, ಸಮಾನತೆ, ಸರ್ವಧರ್ಮ ಸಹಿಷ್ಣುತೆ, ಸಹಭಾಳ್ವೆಯ ಸಂಕೇತಗಳಿಗೆ ಧಕ್ಕೆಯುಂಟಾಗಿದೆ.ಭಾರತದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಗತ್ಯ ಅನುಮಾನಗಳನ್ನು ಹುಟ್ಟು ಹಾಕಲಾಗುತ್ತಿದೆ.
ಜಗತ್ತಿಗೆ ಶಾಂ,ಸಹಭಾಳ್ವೆ ಭ್ರಾತೃತ್ವ ಬೋಧಿಸಿದ ನಾಡಲ್ಲಿ ಅಶಾಂತಿ, ಅಪನಂಬಿಕೆ ಎಂಬ ಅಪಸವ್ಯಗಳು ಹುಟ್ಟುತ್ತಿವೆ.ಈ ಅಪಾಯಕಾರಿ ಹುಟ್ಟನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕಾಗಿದೆ.
ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಎತ್ತಿ ಹಿಡಿಯುವಲ್ಲಿ ರಾಷ್ಟ್ರಪತಿ ಹುದ್ದೆ ಅತ್ಯಂತ ಮಹತ್ವದ್ದಾಗಿದೆ.
ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ದೇಶದ ಎಲ್ಲಾ ರಾಜಕೀಯ ಪಕ್ಷಗಳು ಈ ಚುನಾವಣೆ ಮೂಲಕ ಜಗತ್ತಿಗೆ ಒಂದು ಸಂದೇಶ ರವಾನಿಸಬೇಕಿದೆ. ಇಲ್ಲಿನ ರಾಜಕೀಯ ಪಕ್ಷಗಳ ಒಲವು-ನಿಲುವು ಎನೇ ಇರಲಿ ದೇಶದ ಸಂವಿಧಾನದ ಮೂಲ ಆಶಯಗಳು, ದೇಶದ ಅಸ್ಮಿತೆಯಾದ ಸಹಭಾಗಿತ್ವ, ಸಹಭಾಳ್ವೆ, ಸಮಾನತೆ, ಸೋದರತೆ,ಸಹಿಷ್ಣುತೆ ವಿಷಯದಲ್ಲಿ ರಾಜಿ ಇಲ್ಲ ನಾವೆಲ್ಲರೂ ಒಂದೇ.ಇದನ್ನು ಎತ್ತಿ ಹಿಡಿಯುವುದು ಈ ರಾಷ್ಟ್ರದ ರಾಷ್ಟ್ರಪತಿ ಎಂಬುದನ್ನು ತೋರಿಸಬೇಕಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳು ತಮ್ಮೆಲ್ಲಾ ತತ್ವ, ಸಿದ್ಧಾಂತಗಳನ್ನು ಬದಿಗೊತ್ತಿ ಒಟ್ಟಾಗಬೇಕಿದೆ.ಒಗ್ಗಟ್ಟಿನಿಂದ ಸರ್ವಾನುಮತದಿಂದ ರಾಷ್ಟ್ರಪತಿಗಳನ್ನು ಆಯ್ಕೆ ಮಾಡಬೇಕಿದೆ.
ಈ ಆಯ್ಕೆ ರಾಜಕೀಯೇತರವಾಗಿದ್ದರಂತೂ ಮತ್ತೂ ಒಳ್ಳೆಯದೇ.ಇದಕ್ಕಾಗಿ ಉದ್ಯಮರಂಗದಲ್ಲಿ ದೇಶದ ಘನತೆ ಹೆಚ್ಚಿಸಿದ ಇನ್ಫೋಸಿಸ್ ನಾರಾಯಣಮೂರ್ತಿ, ಮಕ್ಕಳ ಹಕ್ಕುಗಳ ಹೋರಾಟಗಾರ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಕೈಲಾಸ್ ಸತ್ಯಾರ್ಥಿ, ಖ್ಯಾತ ಕೃಷಿ ವಿಜ್ಞಾನಿ ಡಾ.ಸ್ವಾಮಿನಾಥನ್, ಪರಿಸರವಾದಿ ಮೇಧಾ ಪಾಟ್ಕರ್, ಗಿರಿಜನರ ಹಕ್ಕುಗಳ ಹೋರಾಟಗಾರ, ಶಿಕ್ಷಣ ತಜ್ಞ ಡಾ. ಅಚ್ಯುತಾನಂದ ಸಮಂತಾ ಸೇರಿದಂತೆ ಹಲವಾರು ಮಂದಿ ಮಹನೀಯರನ್ನು ಈ ಹುದ್ದೆಗೆ ಪರಿಗಣಿಸಿದರೆ ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಘನತೆ ಮತ್ತಷ್ಟು ಹೆಚ್ಚಲಿದೆ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಇದನ್ನು ಹೊರತು ಪಡಿಸಿ ಯಾವುದೇ ರಾಜಕೀಯ ಹಿನ್ನೆಲೆಯಿರುವ ನಾಯಕರನ್ನು ಆಯ್ಕೆ ಮಾಡಿದರೂ ಕೂಡಾ ಎಲ್ಲಾ ಪಕ್ಷಗಳು ತಮ್ಮ ಸಿದ್ದಾಂತ, ರಾಜಕಾರಣ ಮರೆತು ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಬೇಕು. ಹಾಗಾದಲ್ಲಿ ಮಾತ್ರ ಜಗತ್ತಿನ ಹಲವೆಡೆ ಭಾರತದ ಬಗ್ಗೆ ಉಂಟಾಗಿರುವ ತಹತಹಗಳಿಗೆ ಉತ್ತರ ನೀಡಲು ಸಾಧ್ಯ..