ಬೆಂಗಳೂರು,ಜೂ.14- ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಹಿರಿಯ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ದಾಂತ್ ಕಪೂರ್ಗೆ ಜಾಮೀನು ದೊರೆತಿದೆ.
ನಗರದ ಎಂಜಿ ರಸ್ತೆಯಲ್ಲಿನ ಐಷಾರಾಮಿ ಪಾರ್ಕ್ ಹೋಟೆಲ್ವೊಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ಸಿದ್ಧಾಂತ್ ಸೇರಿದಂತೆ ಐವರನ್ನು ಬಂಧಿಸಿ ಹಲಸೂರು ಠಾಣೆಗೆ ಕರೆದೊಯ್ಯಲಾಗಿತ್ತು.
ಆರೋಪಿಗಳ ಡ್ರಗ್ಸ್ ಪರೀಕ್ಷೆ ಪಾಸಿಟಿವ್ ಬಂದಿತ್ತು. ಈ ಪ್ರಕರಣದಲ್ಲಿ ಈಗ ಐವರಿಗೂ ಜಾಮೀನು ನೀಡಲಾಗಿದೆ.
ಈ ಪ್ರಕರಣದಲ್ಲಿ ಸಿದ್ದಾಂತ್ ಕಪೂರ್ ಹಾಗು ನಾಲ್ವರನ್ನು ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರು ಪೂರ್ವ ಡಿಸಿಪಿ ಭೀಮಾಶಂಕರ್ ಗುಳೇದ್ ಸ್ಪಷ್ಟಪಡಿಸಿದ್ದಾರೆ.
ಡ್ರಗ್ ಪೆಡ್ಲಿಂಗ್ ಮಾಡದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ವಿಚಾರಣೆಗೆ ಕರೆದಾಗ ಠಾಣೆಗೆ ಬರಬೇಕಾಗುತ್ತದೆ ಎನ್ನುವ ಷರತ್ತು ವಿಧಿಸಿ ಬಿಡುಗಡೆ ಮಾಡಲಾಗಿದೆ ಎಂದರು.
ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ಜೊತೆಗೆ ಅಕಿಲ್ ಸೋನಿ, ಹರ್ಜೋತ್ ಸಿಂಗ್, ಅಕಿಲ್, ಹನಿಯನ್ನು ಹಲಸೂರು ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರು.
ಪ್ರಕರಣದ ಹಿನ್ನೆಲೆ:
ಕಳೆದ ಜೂ.12ರ ರಾತ್ರಿ ಎಂಜಿ ರಸ್ತೆಯಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ದಾಳಿ ನಡೆಸಿದ ಹಲಸೂರು ಪೊಲೀಸರು ಸಿದ್ದಾಂತ್ ಕಪೂರ್ ಸೇರಿ ನಾಲ್ವರನ್ನು ಬಂಧಿಸಿದ್ದರು.
ದಾಳಿ ವೇಳೆ ಸುಮಾರು 35 ಮಂದಿ ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದರು. ಈ ವೇಳೆ ನಡೆಸಿದ ಪರೀಕ್ಷೆಯಲ್ಲಿ ಐವರು ಡ್ರಗ್ಸ್ ಸೇವಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಸೆಕ್ಷನ್ 22ಎ, 22ಬಿ ಮತ್ತು 27ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು.