ತಮಿಳುನಾಡಿನ ಪಪ್ಪರಪಟ್ಟಿಯಲ್ಲಿರುವ ಜನಪ್ರಿಯ ದೇವಸ್ಥಾನದ ಬೃಹತ್ ರಥ ಸೋಮವಾರ ಮಗುಚಿ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಧರ್ಮಪುರಿ ಜಿಲ್ಲೆಯ ಸಿ ಮನೋಹರನ್ (57) ಮತ್ತು ಜಿ ಸರವಣನ್ (50) ಎಂದು ಗುರುತಿಸಲಾಗಿದೆ. ವೈಕಾಶಿ ಹಬ್ಬದ ಅಂಗವಾಗಿ ಕಾಳಿಯಮ್ಮನ ದೇವಸ್ಥಾನದ ಅಲಂಕೃತ ರಥವನ್ನು ಪೂಜಾ ಸ್ಥಳದ ಬಳಿಯ ಪ್ರಮುಖ ಬೀದಿಗಳಲ್ಲಿ ಎಳೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ .ರಥ ಮಗುಚಿ ಬಿದ್ದಾಗ ಅದರ ಚಕ್ರದಡಿ ಸಿಲುಕಿದ ಇಬ್ಬರ ರಕ್ಷಣೆಗೆ ರಥ ಎಳೆಯುತ್ತಿದ್ದ ಭಕ್ತರು ಹಾಗು ಮೆರವಣಿಗೆ ವೀಕ್ಷಿಸುತ್ತಿದ್ದವರು ತಕ್ಷಣ ಧಾವಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಚಲಿಸುತ್ತಿದ್ದ ರಥವು ಇದ್ದಕ್ಕಿದ್ದಂತೆ ಉರುಳಿ ಬಿದ್ದಿದೆ. ಈ ವೇಳೆ ಇಬ್ಬರು ಭಕ್ತರು ರಥದ ಮರದ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ” ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಚೆನ್ನೈನಲ್ಲಿ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ದುರ್ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.