ಭುವಿ ಮಾತಾಡಿದ್ದೇ ಕನ್ನಡ, ಆಕೆ ಹೇಳಿದ್ದೇ ವೇದವಾಕ್ಯ, ಆಕೆಯೇ ಕನ್ನಡಿಗ ಮೌಲ್ಯಗಳ ಮೂರ್ತರೂಪ, ಆಕೆಯೇ ನಿಜವಾದ ಕನ್ನಡತಿ ಎಂದು ಬಿಂಬಿಸಿ ಆರಂಭಿಸಿದ ಕನ್ನಡತಿ ಧಾರವಾಹಿ ವೀಕ್ಷಕರ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅನೇಕ ತಿಂಗಳುಗಳಿಂದ ಮುಗ್ಗರಿಸುತ್ತಾ ಬಂದಿದೆ.
ನಾಟಕೀಯ ವರ್ತನೆಗಳು, ಹೇಳಿದ್ದನ್ನೇ ನೂರಾರು ಬೇರೆ ಬೇರೆ ರೀತಿಗಳಲ್ಲಿ ಹೇಳುವುದು, ತಾನೇ ಸರಿ ತನಗೇ ಎಲ್ಲಾ ಗೊತ್ತು, ತಾನೊಬ್ಬಳೇ ಅತೀ ಸಭ್ಯಳು ಎನ್ನುವಂತೆ ನಡೆದುಕೊಳ್ಳುವ ಭುವಿಯ ಪಾತ್ರ ವೀಕ್ಷಕರಿಗೆ ಉಡಾಫೆಯಂತೆ ಕಂಡುಬಂದಿರಬಹುದು. ತನ್ನ ಆಪ್ತ ಸ್ನೇಹಿತೆ ಪ್ರೀತಿಸಿದವನನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾ ತನಗೇನೂ ಗೊತ್ತಿಲ್ಲ ಎಂಬಂತೆ ಅತೀ ಮುಗ್ದತೆಯನ್ನು ತೋರುತ್ತಾ ವೀಕ್ಷಕರ ಬುದ್ದಿವಂತಿಕೆಗೇ ಮಂಕುಬೂದಿ ಎರಚಲು ಪ್ರಯತ್ನಿಸಿದ ಈ ಭುವಿಯ ಪಾತ್ರ ಜನರ ಸಹನೆಯನ್ನು ಒಡೆದುಹಾಕಿದೆ ಎನ್ನಲಾಗಿದೆ.
ಸಂಸ್ಕೃತದಿಂದ ಬಂದ ಪದಗಳನ್ನು ಸಂಸ್ಕೃತದ ಭಾಷಾ ಸಂಸ್ಕೃತಿಯ ಪ್ರಕಾರವೇ ಬಳಸಬೇಕು, ಉಚ್ಚರಿಸಬೇಕು ಅದು ಹಾಗಲ್ಲ ಹೀಗೆ ಹೀಗಲ್ಲ ಹಾಗೆ ಎಂದು ಬಹುಜನರು ಮಾತಾಡುವ ಕನ್ನಡವನ್ನು ತಪ್ಪು ಕನ್ನಡವೆಂದೆಲ್ಲ ತನ್ನ ಕರ್ಮಠ ಸಿದ್ಧಾಂತಗಳ ಮೂಲಕ ಪ್ರತಿಪಾದಿಸುತ್ತ ಕನ್ನಡವನ್ನು ಕಬ್ಬಿಣದ ಕಡಲೆ ಮಾಡಲು ಹೋರಾಟ ಭುವಿಯ ಪಾತ್ರ ವನ್ನು ಸಜ್ಜನ ಕನ್ನಡ ವೀಕ್ಷಕರು ತಿರಸ್ಕರಿಸಿದಂತೆ ಕಾಣುತ್ತಿದೆ.
ಅನೇಕ ವಾರಗಳಿಂದ ಭುವಿಯ ಏಕಪಾತ್ರಾಭಿನಯದ ಕನ್ನಡತಿ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಅತ್ಯಂತ ಕಡಿಮೆ ವೀಕ್ಷಕರನ್ನು ಹೊಂದಿದ ಪ್ರೈಮ್ ಟೈಮ್ ಸೀರಿಯಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ತನ್ನ ಕಟ್ಟಾ ಅಭಿಮಾನಿಗಳಿಗೂ ಆತಂಕ ಕೊಟ್ಟಿದೆ. ಮೊದಲು ಸೀರಿಯಲ್ ನ ಸೋಲನ್ನು ಐಪಿಎಲ್ ಮೇಲೆ ಗೂಬೆ ಕೂರಿಸಿ ತಪ್ಪಿಸಿಕೊಳ್ಳಲು ಹವಣಿಸಿದ ಚಾನಲ್ ಮಂದಿ ಈಗ ಏನೂ ಹೇಳಲಾಗದೆ ವಿಲವಿಲ ಒದ್ದಾಡುತ್ತಿದ್ದಾರಂತೆ.