ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸರ್ಕಾರಿ ಆಸ್ಪತ್ರೆಯ ಕಡೆಗೆ ಸುಳಿಯುವುದಿಲ್ಲ. ನಟ-ನಟಿಯರು ಖಾಸಗಿ ಹಾಸ್ಪಿಟಲ್ನಲ್ಲಿಯೇ ತಮಗೆ ಬೇಕಾದ ಚಿಕಿತ್ಸೆ ಪಡೆಯುತ್ತಾರೆ. ಅಂಥವರ ನಡುವೆ ಕಿರುತೆರೆ ನಟಿ ಪೂರ್ಣಿಮಾ ಅವರು ಭಿನ್ನವಾಗಿ ನಿಂತಿದ್ದಾರೆ. ಹಲವು ಸೀರಿಯಲ್ನಲ್ಲಿ ನಟಿಸಿದ ಅನುಭವ ಇರುವ ಅವರು ಈಗ ಮಗುವಿಗೆ ಜನ್ಮ ನೀಡಿದ್ದಾರೆ. ಅದು ಮಂಡ್ಯ ಜಿಲ್ಲೆಯ ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಎಂಬುದು ಗಮನಿಸಬೇಕಾದ ಅಂಶ.
ಅಷ್ಟಕ್ಕೂ ಅವರು ಬೆಂಗಳೂರಿನ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹವಾಸ ಬೇಡ ಎಂದು ಕೀಲಾರ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು ಯಾಕೆ? ಅದರ ಹಿಂದಿದೆ ಒಂದು ಇಂಟರೆಸ್ಟಿಂಗ್ ವಿಷಯ. ಖಾಸಗಿ ಆಸ್ಪತ್ರೆಯವರು ಆಗಲ್ಲ ಎಂದು ಕೈಚೆಲ್ಲಿದ ಕಾರ್ಯವನ್ನು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಮಾಡಿ ತೋರಿಸಿದ್ದಾರೆ.
ಪೂರ್ಣಿಮಾ ಅವರು ಮಂಡ್ಯದ ಮದ್ದೂರಿನವರು. ಆದರೆ ಸೆಟ್ಲ್ ಆಗಿರುವುದು ಬೆಂಗಳೂರಿನಲ್ಲಿ. ಗರ್ಭಿಣಿ ಆದಾಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏನಾಯಿತು ಎಂಬುದನ್ನು ವಿಡಿಯೋ ಮೂಲಕ ಪೂರ್ಣಿಮಾ ವಿವರಿಸಿದ್ದಾರೆ. ‘ಪ್ರೈವೇಟ್ ಆಸ್ಪತ್ರೆಯಲ್ಲಿ ನನಗೆ ಹೆದರಿಸುತ್ತಿದ್ದರು. ಪ್ಲಸೆಂಟಾ ಡೌನ್ ಇದೆ ಎನ್ನುತ್ತಿದ್ದರು. ಏನೇನೋ ಹೇಳುತ್ತಿದ್ದರು ಎಂಬ ಕಾರಣಕ್ಕೆ ಒಂದಿಬ್ಬರು ವೈದ್ಯರನ್ನು ಚೇಂಜ್ ಮಾಡಿದೆ. ಅಲ್ಲಿ ನನಗೆ ಕಂಫರ್ಟೆಬಲ್ ಎನಿಸುತ್ತ ಇರಲಿಲ್ಲ. ಭಯದಲ್ಲೇ ದಿನ ಕಳೆಯುತ್ತಿದ್ದೆ’ ಎಂದು ಪೂರ್ಣಿಮಾ ಹೇಳಿದ್ದಾರೆ.
‘ನಮ್ಮ ಕೀಲಾರದಲ್ಲಿ ಒಳ್ಳೆಯ ಸರ್ಕಾರಿ ಆಸ್ಪತ್ರೆ ಇದೆ ಎಂಬುದು ತಿಳಿಯಿತು. ಸರ್ಜರಿಗೂ ಇಲ್ಲಿ ಒಳ್ಳೆಯ ವ್ಯವಸ್ಥೆ ಇದೆ. ಹಳ್ಳಿ ಎಂಬ ಕಾರಣಕ್ಕೆ ಮೊದಲಿಗೆ ಅನುಮಾನ ಎನಿಸಿತು. ಆದರೂ ಇಲ್ಲೇ ಬಂದು ತೋರಿಸಿಕೊಂಡೆ. ನನಗೆ ಇಲ್ಲಿ ತುಂಬ ಉಪಯೋಗ ಆಯಿತು. ಒಂದು ರೂಪಾಯಿ ಖರ್ಚು ಇಲ್ಲದೇ ಸರ್ಜರಿ ಆಯಿತು. ಪ್ರತಿಯೊಬ್ಬರನ್ನೂ ಇಲ್ಲಿನ ಸಿಬ್ಬಂದಿ ತುಂಬ ಚೆನ್ನಾಗಿ ನೋಡಿಕೊಳುತ್ತಾರೆ. ಸಿಸೇರಿಯನ್ ವ್ಯವಸ್ಥೆಗೆ ರೂಮ್ ಚೆನ್ನಾಗಿದೆ. ಕೆಲವು ಖಾಸಗಿ ಆಸ್ಪತ್ರೆಯಲ್ಲೂ ಇಷ್ಟು ಒಳ್ಳೆಯ ವ್ಯವಸ್ಥೆ ಸಿಗಲ್ಲ. ಆದರೂ ಖಾಸಗಿಯವರು ಅನವಶ್ಯಕವಾಗಿ 2 ಲಕ್ಷದವರೆಗೂ ಹಣ ಖರ್ಚು ಮಾಡಿಸುತ್ತಾರೆ’ ಎಂದು ಪೂರ್ಣಿಮಾ ಹೇಳಿದ್ದಾರೆ.
‘ಎಲ್ಲ ಖಾಸಗಿ ಆಸ್ಪತ್ರೆಯವರು ಹಣ ಸುಲಿಗೆ ಮಾಡುತ್ತಾರೆ ಅಂತ ನಾನು ಹೇಳಲ್ಲ. ಅದೇ ರೀತಿ ಎಲ್ಲ ಸರ್ಕಾರಿ ಆಸ್ಪತ್ರೆ ಇಷ್ಟೇ ಚೆನ್ನಾಗಿ ಇದೆ ಎಂದು ಕೂಡ ಹೇಳುವುದಿಲ್ಲ. ನನಗೆ ಕೀಲಾರದ ಆಸ್ಪತ್ರೆಯಲ್ಲಿ ಒಳ್ಳೆಯ ಅನುಭವ ಆಗಿದೆ. ನೀವು ಕೂಡ ನಿಮ್ಮ ಊರುಗಳಲ್ಲಿ ಇರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ. ಸರ್ಕಾರ ನಮಗೆ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳಿ’ ಎಂದಿದ್ದಾರೆ ಪೂರ್ಣಿಮಾ.